ಉದ್ಯಮದಿಂದ ಮೊದಲೇ ಹೊರನಡೆದಿದ್ದ ವಿರಾಟ್ ಕೊಹ್ಲಿ; 2 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಸಂಸ್ಥೆ
ಬೆಂಗಳೂರು: ನಗರದ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ-ಸ್ವಾಮ್ಯ ಹೊಂದಿದ್ದ ಎನ್ನಲಾದ ‘ಒನ್8 ಕಮ್ಯೂನ್’ (One8 Commune) ರೆಸ್ಟೋರೆಂಟ್ ಈಗ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮುಚ್ಚಲ್ಪಟ್ಟಿದೆ. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ಕಟ್ಟಡದ ಮಾಲೀಕರು ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬಾಕಿ ಮೊತ್ತ ಪಾವತಿಸುವವರೆಗೆ ರೆಸ್ಟೋರೆಂಟ್ ಆವರಣವನ್ನು ಬಂದ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇರುವ ಈ ಪ್ರತಿಷ್ಠಿತ ರೆಸ್ಟೋರೆಂಟ್ ಅನ್ನು ಟ್ರಿಯೋ ಹಿಲ್ಸ್ ಹಾಸ್ಪಿಟಾಲಿಟಿ (Trio Hills Hospitality) ಸಂಸ್ಥೆ ನಡೆಸುತ್ತಿತ್ತು. ಕಳೆದ ಆರು ತಿಂಗಳಿನಿಂದ ಬಾಡಿಗೆ ಪಾವತಿಸದಿರುವುದು ಮಾತ್ರವಲ್ಲದೆ, ನಿರ್ವಹಣಾ ವೆಚ್ಚ ಮತ್ತು ಆದಾಯ ಹಂಚಿಕೆಯ ಹಣದಲ್ಲೂ ಸಂಸ್ಥೆ ಸುಸ್ತಿದಾರಿಯಾಗಿತ್ತು. ಈ ಬೆಳವಣಿಗೆಗಳಿಗೂ ಮೊದಲೇ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಬಿಬಿಎಂಪಿಯಿಂದ ಬಂದಿದ್ದ ಸರಣಿ ನೋಟಿಸ್‌ಗಳಿಂದ ಎಚ್ಚೆತ್ತಿದ್ದ ವಿರಾಟ್ ಕೊಹ್ಲಿ, ಈ ಉದ್ಯಮದಿಂದ ದೂರ ಸರಿದು ತಮ್ಮ ಬ್ರ್ಯಾಂಡ್ ಹೆಸರನ್ನು ಹಿಂಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಕೊಹ್ಲಿ ಬ್ರ್ಯಾಂಡ್ ಹೊರಹೋದ ಬಳಿಕ ಗ್ರಾಹಕರ ಸಂಖ್ಯೆ ಇಳಿಮುಖವಾಗಿ ಸಂಸ್ಥೆ ಭಾರೀ ನಷ್ಟ ಅನುಭವಿಸುತ್ತಿತ್ತು ಎನ್ನಲಾಗಿದೆ.
ಈ ಹಿಂದೆ ಕೂಡ ಈ ರೆಸ್ಟೋರೆಂಟ್ ಹಲವು ಕಾನೂನು ಸಂಕಷ್ಟಗಳಿಗೆ ಗುರಿಯಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಧೂಮಪಾನ ವಲಯಕ್ಕೆ ಸಂಬಂಧಿಸಿದಂತೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಅಡಿಯಲ್ಲಿ ಇಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಅಗ್ನಿಶಾಮಕ ದಳದ ನಿರಪೇಕ್ಷ ಪ್ರಮಾಣಪತ್ರ (NOC) ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಬಗ್ಗೆ ಬಿಬಿಎಂಪಿ ನೋಟಿಸ್ ನೀಡಿತ್ತು. ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ವಹಿವಾಟು ನಡೆಸುತ್ತಿದ್ದ ಕಾರಣಕ್ಕೂ ಈ ರೆಸ್ಟೋರೆಂಟ್ ಮೇಲೆ ಈ ಹಿಂದೆ ಪೊಲೀಸ್ ಕ್ರಮ ಜರುಗಿಸಲಾಗಿತ್ತು. ಸದ್ಯ ನ್ಯಾಯಾಲಯದ ಆದೇಶದಂತೆ ಬೀಗ ಬಿದ್ದಿದ್ದು, ಬಾಕಿ ಹಣ ಚುಕ್ತಾ ಆಗುವವರೆಗೂ ರೆಸ್ಟೋರೆಂಟ್ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.









Comments
Leave a Comment