ನಿನ್ನೆ ‘ಫೇಲ್’, ಇಂದು ‘ಟಾಪರ್’: ಶಿರಸಿಯ ವಿದ್ಯಾರ್ಥಿನಿ ಲೀಸಾ ಖಾನಮ್ ಫಲಿತಾಂಶದಲ್ಲಿ ಭಾರಿ ಎಡವಟ್ಟು; ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.
ಕಾರವಾರ: ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿಯ ಬೇಜವಾಬ್ದಾರಿತನ ಇಂದು ಮಿತಿ ಮೀರಿದೆ. ಪರೀಕ್ಷೆ ಬರೆದರೂ ‘ಗೈರು’ ಎಂದು ಹಾಜರಿ ಹಾಕಿ, ಅಂಧ ವಿದ್ಯಾರ್ಥಿನಿಯೊಬ್ಬಳ ಶ್ರಮಕ್ಕೆ ಮಣ್ಣೆರೆಚಿದ ಮಂಡಳಿಯ ಕಾರ್ಯವೈಖರಿ ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಫೇಲ್ ಎಂದು ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ವಿದ್ಯಾರ್ಥಿನಿ ಇಂದು ಶಾಲೆಗೆ ಟಾಪರ್ ಎಂಬ ಸುದ್ದಿ ಹರಿದಾಡುತ್ತಿದ್ದು, ಗೊಂದಲದ ಗೂಡಾಗಿದೆ.
ಏನಿದು ಘಟನೆ?
ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದರು. ಗುರುವಾರ ಫಲಿತಾಂಶ ಪ್ರಕಟವಾದಾಗ ಆಕೆಗೆ ಬರಸಿಡಿಲು ಬಡಿದಂತಾಗಿತ್ತು. ಸಮಾಜ ವಿಜ್ಞಾನ ವಿಷಯದಲ್ಲಿ ಆಕೆ ಗೈರುಹಾಜರಾಗಿದ್ದಾರೆ ಎಂದು ನಮೂದಿಸಲಾಗಿತ್ತು. ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಈ ಒಂದು ವಿಷಯದ 'ಗೈರು' ಹಾಜರಿಯಿಂದಾಗಿ ಆಕೆ 'ಫೇಲ್' ಎಂದು ತೋರಿಸಲಾಗಿತ್ತು.
ಅಧಿಕಾರಿಗಳ ಯಡವಟ್ಟು:
ಈ ಎಡವಟ್ಟಿನ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮರುಪರಿಶೀಲನೆ ನಡೆಸಿದಾಗ ಇಂದು ಆಕೆಗೆ ಸಮಾಜ ವಿಜ್ಞಾನದಲ್ಲಿ 97 ಅಂಕಗಳು ಲಭಿಸಿವೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಆಕೆ ಒಟ್ಟು ಶೇ. 84.16 ರಷ್ಟು ಅಂಕಗಳೊಂದಿಗೆ ಶಾಲೆಗೆ ಟಾಪರ್ ಎನಿಸಿಕೊಂಡಿದ್ದಾಳೆ. ಆದರೆ, ದುರಂತವೆಂದರೆ ಶಿರಸಿ ಡಿಡಿಪಿಐ ಅವರು ಈ ಫಲಿತಾಂಶವನ್ನು "ಅಧಿಕೃತವಲ್ಲ" ಎನ್ನುತ್ತಿದ್ದಾರೆ.
"ಈಗ ಹರಿದಾಡುತ್ತಿರುವ ರಿಸಲ್ಟ್ ಪ್ರತಿ ಅಧಿಕೃತವಲ್ಲ. ವಿದ್ಯಾರ್ಥಿನಿಯ ಪೇಪರ್ ಮಿಸ್ ಆಗಿರುವುದು ನಿಜ. ಅದರ ಪರಿಶೀಲನೆ ನಡೆಯುತ್ತಿದೆ, ಅಧಿಕೃತ ಫಲಿತಾಂಶ ಬರಲು ಇನ್ನೂ ಎರಡು ದಿನ ಬೇಕು."
— ಡಿಡಿಪಿಐ, ಶಿರಸಿ.
ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ:
ಒಬ್ಬ ವಿಶೇಷ ಚೇತನ ವಿದ್ಯಾರ್ಥಿನಿ ಪಟ್ಟ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಪರೀಕ್ಷಾ ಮಂಡಳಿಯು ಅಂಕಪಟ್ಟಿ ಸಿದ್ಧಪಡಿಸುವಾಗ ಕನಿಷ್ಠ ಕಾಳಜಿ ವಹಿಸದಿರುವುದು ಅವರ "ದುರಾವಸ್ಥೆಯ ಪರಮಾವಧಿ"ಯನ್ನು ತೋರಿಸುತ್ತದೆ. ಅಂಧ ವಿದ್ಯಾರ್ಥಿನಿಯೊಬ್ಬಳ ಪರೀಕ್ಷಾ ಪತ್ರಿಕೆಯನ್ನೇ ಕಳೆದುಕೊಂಡು, ಬಳಿಕ ಗೈರು ಎಂದು ತೋರಿಸಿ, ಈಗ ಪರಿಶೀಲನೆಗೆ ಸಮಯ ಕೇಳುತ್ತಿರುವುದು ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ, ಬೋರ್ಡ್ ಮಾಡಿದ ಯಡವಟ್ಟಿನಿಂದಾಗಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಫಲಿತಾಂಶ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು, ನ್ಯಾಯಕ್ಕಾಗಿ ಆಕೆ ಮತ್ತು ಆಕೆಯ ಪೋಷಕರು ಕಾಯುವಂತಾಗಿದೆ.






Comments
Leave a Comment