ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಕಿತ್ತ ವಿಶ್ವ ದಾಖಲೆ ವೀರನಿಗೆ ಬಿತ್ತು ಬರೆ!
ಕಠ್ಮಂಡು: ಒಂದೆಡೆ ವಿಶ್ವದಾದ್ಯಂತ ಐಪಿಎಲ್ 2026ರ ಕ್ರಿಕೆಟ್ ಅಬ್ಬರ ಜೋರಾಗಿದ್ದರೆ, ಇನ್ನೊಂದೆಡೆ ನೇಪಾಳ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರನೊಬ್ಬನ ವಿವಾದಾತ್ಮಕ ನಡೆ ಈಗ ಕ್ರೀಡಾ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿದೊಡ್ಡ ಇತಿಹಾಸ ಸೃಷ್ಟಿಸಿದ್ದ ನೇಪಾಳದ ವೇಗಿ ಕರಣ್ ಕೆಸಿ, ಅಂಪೈರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಹಾಕಿದ ವಿವಾದಾತ್ಮಕ ಪೋಸ್ಟ್‌ನಿಂದಾಗಿ ಈಗ ಅಮಾನತು ಹಾಗೂ ದಂಡದ ರೂಪದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ.
ಏಪ್ರಿಲ್ 11ರ ಶನಿವಾರದಂದು ನಡೆದ 'ಪ್ರಧಾನ ಮಂತ್ರಿ ಕಪ್ ಏಕದಿನ ರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್' ಪಂದ್ಯದ ವೇಳೆ ಈ ಅಹಿತಕರ ಘಟನೆ ನಡೆದಿದೆ. ಪಂದ್ಯದ ಸಂದರ್ಭದಲ್ಲಿ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನಗೊಂಡಿದ್ದ ಕರಣ್ ಕೆಸಿ, ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, "ಪಂದ್ಯದ ಸಮಯದಲ್ಲಿ ಆಟಗಾರನೊಬ್ಬ ಆಕಸ್ಮಿಕವಾಗಿ ಅಂಪೈರ್‌ಗೆ ಹೊಡೆದರೆ ಏನಾಗುತ್ತದೆ?" ಎಂಬ ವಿಚಿತ್ರ ಪ್ರಶ್ನೆಯನ್ನು ಬರೆದುಕೊಂಡಿದ್ದರು. ಇದನ್ನು ಅಂಪೈರ್‌ಗಳಿಗೆ ನೀಡಿದ ಪರೋಕ್ಷ ಬೆದರಿಕೆ ಎಂದೇ ಪರಿಗಣಿಸಲಾಗಿದ್ದು, ಈ ಪೋಸ್ಟ್ ಪಂದ್ಯದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರಣ್ ಅವರ ಈ ಬೇಜವಾಬ್ದಾರಿಯುತ ನಡೆಯಿಂದ ರೊಚ್ಚಿಗೆದ್ದ ಅಂಪೈರ್‌ಗಳು ತಕ್ಷಣವೇ ತುರ್ತು ಸಭೆ ಕರೆದು, ಆಟಗಾರನ ಈ ವರ್ತನೆಯು ಪಂದ್ಯದ ಅಧಿಕಾರಿಗಳ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ಗಂಭೀರ ಸ್ವರೂಪಕ್ಕೆ ತಿರುಗುತ್ತಿರುವುದನ್ನು ಅರಿತ ಕರಣ್ ಕೆಸಿ, ಕೂಡಲೇ ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಆದರೆ, ಪಟ್ಟು ಬಿಡದ ಅಂಪೈರ್‌ಗಳು ನೇಪಾಳ ಕ್ರಿಕೆಟ್ ಸಂಘಕ್ಕೆ (CAN) ಅಧಿಕೃತ ದೂರು ನೀಡಿದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಮಂಡಳಿಯು ಶಿಸ್ತು ಕ್ರಮವಾಗಿ ಕರಣ್ ಕೆಸಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಲ್ಲದೆ, ನೂರಕ್ಕೆ ನೂರರಷ್ಟು ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಿದೆ.
ನೇಪಾಳ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ಬೌಲರ್ ಆಗಿರುವ ಕರಣ್ ಕೆಸಿ, ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಹೆಸರಾದವರು. ಪಂದ್ಯವೊಂದರ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವುದು ಕಷ್ಟದ ಕೆಲಸ, ಆದರೆ ಕರಣ್ ಈ ಸಾಧನೆಯನ್ನು ಬರೋಬ್ಬರಿ 3 ಬಾರಿ ಮಾಡುವ ಮೂಲಕ ವಿಶ್ವದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಹಿಂದೆ ಹಾಂಗ್ ಕಾಂಗ್ ವಿರುದ್ಧ ಎರಡು ಬಾರಿ ಹಾಗೂ ಮಲೇಷ್ಯಾ ವಿರುದ್ಧ ಒಂದು ಬಾರಿ ಈ ಮೈಲಿಗಲ್ಲು ನಿರ್ಮಿಸಿದ್ದರು. ಇಂತಹ ಸಾಧಕ ಆಟಗಾರ ಈಗ ಮೈದಾನದ ಶಿಸ್ತು ನಿಯಮ ಉಲ್ಲಂಘಿಸಿ, ಅಂಪೈರ್‌ಗಳ ವಿರುದ್ಧ ವಿವಾದಕ್ಕಿಳಿದು ಮುಖಭಂಗ ಅನುಭವಿಸುವಂತಾಗಿದೆ.









Comments
Leave a Comment