ಎರಡೂವರೆ ತಿಂಗಳಾದರೂ ಪತ್ತೆಯಾಗದ ಪಿಯುಸಿ ವಿದ್ಯಾರ್ಥಿನಿಯರು; ಇದು ‘ಮಿಸ್ಟರಿ’ ನಾಪತ್ತೆಯೇ?
ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಪ್ರಕರಣವು ಈಗ ಪೊಲೀಸರು ಹಾಗೂ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ಕಳೆದ ಜನವರಿ 31ರಂದು ಮನೆ ಬಿಟ್ಟವರು ಇಂದಿಗೂ ಮರಳಿ ಬಂದಿಲ್ಲ. ಬರೋಬ್ಬರಿ 75 ದಿನಗಳು ಕಳೆದರೂ ಇವರ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ನಾಪತ್ತೆಯಾದವರು ಎಲ್ಲೋ ಒಂದು ಕಡೆ ಮೊಬೈಲ್ ಬಳಸುತ್ತಾರೆ ಅಥವಾ ಎಟಿಎಂ ಮೂಲಕ ಹಣ ಡ್ರಾ ಮಾಡುತ್ತಾರೆ. ಆದರೆ, ಈ ಇಬ್ಬರು ಬಾಲಕಿಯರ ಬಳಿ ಮೊಬೈಲ್ ಫೋನ್ ಇಲ್ಲ, ಇತ್ತ ಎಟಿಎಂ ಕಾರ್ಡ್‌ಗಳನ್ನು ಸಹ ಅವರು ಬಳಸುತ್ತಿಲ್ಲ. ಮನೆಯಿಂದ ಹೊರಡುವಾಗ ಇವರು ಕೇವಲ 3 ಸಾವಿರ ರೂಪಾಯಿ ಮಾತ್ರ ತೆಗೆದುಕೊಂಡು ಹೋಗಿದ್ದು, ಇಷ್ಟು ಸುದೀರ್ಘ ಕಾಲ ಆ ಅಲ್ಪ ಹಣದಲ್ಲಿ ಜೀವನ ನಡೆಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಈ ಇಬ್ಬರು ಬಾಲಕಿಯರ ಪತ್ತೆಗಾಗಿ ಪೊಲೀಸರು ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಬಲೆ ಬೀಸಿದ್ದಾರೆ. ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ತನಿಖಾ ತಂಡಗಳು ಹುಡುಕಾಟ ನಡೆಸಿವೆ. ರಾಜ್ಯದ ಚಾಮರಾಜನಗರ ಹಾಗೂ ಮೈಸೂರು ಭಾಗಗಳಲ್ಲೂ ಇವರಿಗಾಗಿ ಗಾಳ ಹಾಕಲಾಗಿದೆ. ತನಿಖೆಯ ವೇಳೆ ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಪೊಲೀಸರಿಗೆ ಲಭ್ಯವಾಗಿತ್ತು. ಆದರೆ, ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಬಾಲಕಿಯರು ಅಲ್ಲಿಂದಲೂ ಜಾಗ ಖಾಲಿ ಮಾಡಿದ್ದರು. ಇವರು ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಇವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಂಚರಿಸುತ್ತಿರಬಹುದು ಎಂದು ಶಂಕಿಸಲಾಗಿದೆ.
ಆದರೆ, ಈ ಬಾಲಕಿಯರು ಮನೆ ಬಿಟ್ಟು ಹೋಗಲು ಬಲವಾದ ಕಾರಣವೇನು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಯಾವುದೇ ಸ್ನೇಹಿತರ ಅಥವಾ ಸಂಬಂಧಿಕರ ಮನೆಗೂ ಇವರು ಭೇಟಿ ನೀಡಿಲ್ಲ. ಇವರ ಇಷ್ಟದ ಜಾಗಗಳನ್ನೆಲ್ಲಾ ಜಾಲಾಡಿದರೂ ಪ್ರಯೋಜನವಾಗಿಲ್ಲ. ಅತ್ತ ಮಗಳಂದಿರನ್ನು ಕಾಣದೆ ಕಂಗಾಲಾದ ಪೋಷಕರು ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಾಲಕಿಯರನ್ನು ಪತ್ತೆಹಚ್ಚಲು ಪೊಲೀಸರಿಗೆ ಒಂದು ವಾರದ ಗಡುವು ನೀಡಿತ್ತು. ಆದರೆ ಆ ಗಡುವು ಮುಗಿದು ಒಂದು ತಿಂಗಳು ಕಳೆದರೂ ಪೊಲೀಸರ ಕೈಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಮೊಬೈಲ್ ಮತ್ತು ಡಿಜಿಟಲ್ ಹಣಕಾಸಿನ ವ್ಯವಹಾರ ನಡೆಸದೆ ಇಬ್ಬರು ಹೆಣ್ಣುಮಕ್ಕಳು ಇಷ್ಟು ದಿನಗಳ ಕಾಲ ನಾಪತ್ತೆಯಾಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಪೋಷಕರು ಹನಿಗಣ್ಣಿನಿಂದ ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದು, ಪೊಲೀಸರ ತನಿಖೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.









Comments
Leave a Comment