'ಶೋಕಿ' ನೀಡಿತು ಶಾಶ್ವತ ನಿದ್ದೆ: ಗನ್ ಲೈಟರ್ ಹಿಡಿದು ಸ್ಟಂಟ್ ಮಾಡ್ತಿದ್ದ ಯುವಕರಿಗೆ ಯಮನಾದ ನಿಂತಿದ್ದ ಟ್ರಕ್!
ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದಷ್ಟು ಮೆಚ್ಚುಗೆಯ ಕಾಮೆಂಟ್‌ಗಳು ಮತ್ತು ಲೈಕ್ಸ್ ಪಡೆಯುವ ಹಪಹಪಿ ಇಂದು ಮೂರು ಕುಟುಂಬದ ದೀಪಗಳನ್ನು ಆರಿಸಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನಲ್ಲಿ ನಡೆದ ಈ ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಘಟನೆಯ ವಿವರ:
ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲಾ ಗ್ರಾಮದ ಉಪಲಕ್ಷ್ಯ ಕೋಲ್ (17), ಅಮರೀಶ್ ಕೋಲ್ (22) ಮತ್ತು ಹೇಮರಾಜ್ ಕೋಲ್ (17) ಎಂಬ ಮೂವರು ಸಹೋದರರು ತಮ್ಮ ಪಲ್ಸರ್ 220 ಬೈಕ್‌ನಲ್ಲಿ ಮೃತ್ಯುವಿನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಈ ಯುವಕರು ಅತಿ ವೇಗವಾಗಿ ಬೈಕ್ ಚಲಾಯಿಸುತ್ತಾ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿದ್ದರು.
ಕ್ಯಾಮೆರಾ ಮುಂದೆ ಸಾಹಸ, ರಸ್ತೆಯ ಮೇಲೆ ಸಾವು:
ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಯುವಕ ಕೈಯಲ್ಲಿ ಗನ್ ರೀತಿಯ ಲೈಟರ್ ಹಿಡಿದು ಪೋಸ್ ನೀಡುತ್ತಿದ್ದರೆ, ಉಳಿದಿಬ್ಬರು ಕಿರುಚಾಡುತ್ತಾ ಸಂಭ್ರಮಿಸುತ್ತಿದ್ದರು. ಇವರ ಈ ಸಾಹಸವನ್ನು ಪಕ್ಕದ ಬೈಕ್‌ನಲ್ಲಿ ಬರುತ್ತಿದ್ದ ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಕ್ಯಾಮೆರಾದತ್ತ ಗಮನ ಹರಿಸಿದ್ದ ಸವಾರ, ರಸ್ತೆ ಬದಿಯಲ್ಲಿ ನಿಂತಿದ್ದ ಬೃಹತ್ ಟ್ರೇಲರ್ ಟ್ರಕ್ ಅನ್ನು ಗಮನಿಸದೆ ನೇರವಾಗಿ ಅದಕ್ಕೆ ಢಿಕ್ಕಿ ಹೊಡೆದಿದ್ದಾನೆ.
ಢಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಮೂವರೂ ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅದೇ ಟ್ರಕ್‌ಗೆ ಹಿಂದಿನಿಂದ ಬಂದ ಮತ್ತೊಂದು ವಾಹನ ಕೂಡ ಢಿಕ್ಕಿಯಾಗಿದ್ದು, ಅದರಲ್ಲಿದ್ದವರ ಸ್ಥಿತಿ ಚಿಂತಾಜನಕವಾಗಿದೆ.









Comments
Leave a Comment