ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..
ಬೆಂಗಳೂರು : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಂದು ಆಕ್ಸಿಜನ್ ಕೊರತೆಯಿಂದ ಉಸಿರು ನಿಂತು ಹೋದಾಗ, ಕೇವಲ 36 ಜೀವಗಳು ಮಣ್ಣಾಗಲಿಲ್ಲ, ಬದಲಿಗೆ ಅಷ್ಟೂ ಕುಟುಂಬಗಳ ಭವಿಷ್ಯವೇ ಕತ್ತಲಿಗೆ ತಳ್ಳಲ್ಪಟ್ಟಿತ್ತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಕರಾಳ ಘಟನೆ ನಡೆದು ಐದು ಸುದೀರ್ಘ ವರ್ಷಗಳೇ ಉರುಳಿವೆ. ಅಂದಿನಿಂದ ಇಂದಿನವರೆಗೆ ಕಣ್ಣೀರಿನಲ್ಲೇ ಕೈತೊಳೆಯುತ್ತಾ, ಬದುಕಿನ ಬಂಡಿ ಎಳೆಯಲು ಹೋರಾಡುತ್ತಿದ್ದ ಸಂತ್ರಸ್ತ ಕುಟುಂಬಗಳಿಗೆ ಈಗ ಕೊನೆಗೂ ನ್ಯಾಯ ಸಿಕ್ಕಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ 21 ವಾರಸುದಾರರಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಸರ್ಕಾರ ಮಾನವೀಯತೆ ಮೆರೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ಮಂಗಳವಾರ ಸಾಕ್ಷಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹ ಫಲಾನುಭವಿಗಳಿಗೆ ಅಧಿಕೃತವಾಗಿ ನೇಮಕಾತಿ ಆದೇಶ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.
ಈ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. ಪತಿಯನ್ನು ಕಳೆದುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಾ ದಿನದೂಡುತ್ತಿದ್ದ ಸೌಮ್ಯಾ ಅವರಂತಹ ಅದೆಷ್ಟೋ ಮನಸುಗಳು ಇಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. "ನನ್ನ ಪತಿ ದೊಡ್ಡಯ್ಯ ಅವರ ಅಗಲಿಕೆ ನಮ್ಮನ್ನು ಬೀದಿಗೆ ತಳ್ಳಿತ್ತು, ಇಂದು ನನ್ನ ಮಗ ಶಶಾಂಕ್ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿದ್ದಾನೆ, ಅವನಿಗೆ ಸರ್ಕಾರಿ ಕೆಲಸ ಸಿಗುತ್ತಿರುವುದು ನಮ್ಮ ಪಾಲಿನ ದೊಡ್ಡ ಆಸರೆ" ಎನ್ನುವ ಸೌಮ್ಯಾ ಅವರ ಮಾತುಗಳಲ್ಲಿ ದಶಕದ ನೋವು ಮತ್ತು ಇಂದಿನ ಸಮಾಧಾನ ಎರಡೂ ಅಡಗಿದೆ. ಬಹುತೇಕರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ (CIMS) ಡಿ-ಗ್ರೂಪ್ ಹಾಗೂ ಚಾಲಕರ ಹುದ್ದೆಗಳನ್ನು ನೀಡಲಾಗುತ್ತಿದ್ದು, ಇದು ಆ ಕುಟುಂಬಗಳಿಗೆ ಹೊಸ ಜೀವನ ನೀಡಲಿದೆ.
ಈ ಹಿಂದೆ 'ಭಾರತ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ನೀಡಿದ್ದ ಭರವಸೆ ಇಂದು ಸಾಕಾರಗೊಂಡಂತಾಗಿದೆ. ತನಿಖಾ ಸಮಿತಿಯ ವರದಿ ಹಾಗೂ ಸಚಿವ ಸಂಪುಟದ ವಿಶೇಷ ಕಾಳಜಿಯಿಂದಾಗಿ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಅವರ ನೆರಳಿನಲ್ಲಿ ಬದುಕುತ್ತಿದ್ದ ಕುಟುಂಬಗಳಿಗೆ ಈ ಉದ್ಯೋಗದ ಆಸರೆ ಒಂದು ಗೌರವಯುತ ಬದುಕನ್ನು ಕಟ್ಟಿಕೊಡಲಿದೆ. ಇದು ಕೇವಲ ಉದ್ಯೋಗದ ಹಂಚಿಕೆಯಲ್ಲ, ವ್ಯವಸ್ಥೆಯೊಂದು ತಪ್ಪು ಮಾಡಿದಾಗ ಅದನ್ನು ಸರಿಪಡಿಸುವ ಮೂಲಕ ತೋರಿದ ಮಾನವೀಯ ಸಂವೇದನೆ.









Comments
Leave a Comment