ಲಕ್ಷಾಂತರ ಮೌಲ್ಯದ ಬೈಕ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಅಪ್ತಾಫ್ ಆಂಡ್ ಗ್ಯಾಂಗ್ ಈಗ ಅರೆಸ್ಟ್; 6.65 ಲಕ್ಷದ ಸೊತ್ತು ಪೊಲೀಸ್ ವಶಕ್ಕೆ
ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ವ್ಯಾಪ್ತಿಯಲ್ಲಿ ಸರಣಿ ಬೈಕ್ ಕಳ್ಳತನ ಮಾಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಅಂತರಜಿಲ್ಲಾ ಬೈಕ್ ಕಳ್ಳರ ಜಾಲವನ್ನು ಅರಸೀಕೆರೆ ಪೊಲೀಸರು ಭೇದಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ 16 ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಸೀಕೆರೆಯ ಅಪ್ತಾಫ್ (23), ಜಾಬೀರ್ (29) ಹಾಗೂ ಶಾಹೀದ್ ಅಹಮ್ಮದ್ (20) ಬಂಧಿತ ಆರೋಪಿಗಳಾಗಿದ್ದು, ಇವರು ಹರಪನಹಳ್ಳಿ ಸೇರಿದಂತೆ ಸುತ್ತಮುತ್ತಲ ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ ಈ ಖದೀಮರು, ಅವುಗಳನ್ನು ಬೇರೆಡೆ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದರು. ಕಳ್ಳತನದ ಬಗ್ಗೆ ಸರಣಿ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ. ಬಂಧಿತರಿಂದ ಸುಮಾರು 6 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ಒಟ್ಟು 16 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.









Comments
Leave a Comment