ಸಿನೆಮಾ ಸ್ಟೈಲ್‌ನಲ್ಲಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿ ಈಗ ಲಾಕಪ್‌ಗೆ; ಮುಂಬೈ ಟು ಗೋವಾ ಸುತ್ತಾಡಿದ್ದ 'ಕೇಡಿ'ಗೆ ಹಾಸನ ಪೊಲೀಸರ ಬಿಗಿಪಾಶ!
ಹಾಸನ:
ಸಿನೆಮಾ ಕಥೆಗಳನ್ನೂ ಮೀರಿಸುವಂತಹ ರೋಚಕ ಕಾರ್ಯಾಚರಣೆಯೊಂದರಲ್ಲಿ ಹಾಸನ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಬರೋಬ್ಬರಿ 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಸವಾಲಾಗಿದ್ದ ವಿಚಾರಣಾಧೀನ ಖೈದಿಯನ್ನು ಹದಿನೈದು ದಶಕಗಳ ಕಾಲದ ಹದ್ದಿನ ಕಣ್ಣಿನ ಹುಡುಕಾಟದ ನಂತರ ಕೊನೆಗೂ ಗೋವಾದಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ರೋಚಕ ಪ್ರಕರಣ?
2011ರ ಆ ದಿನ ಸಕಲೇಶಪುರ ಜೈಲಿನಲ್ಲಿ ಒಂದು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಅತ್ಯಾಚಾರ (u/s 376), ಕೊಲೆ ಯತ್ನ (307) ಹಾಗೂ ದರೋಡೆಯಂತಹ (394) ಗಂಭೀರ ಆರೋಪದ ಮೇಲೆ ಅಂದರ್ ಆಗಿದ್ದ ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ಚನ್ನಕೇಶವ @ ಕೇಶವ @ ಸುರೇಶ, ಪೊಲೀಸರ ಕಣ್ಣಿಗೆ ಮಣ್ಣೆರಚಿ ಜೈಲಿನಿಂದ ಪರಾರಿಯಾಗಿದ್ದ. ಅಂದಿನಿಂದ ಈತ ಪೊಲೀಸರ ಪಾಲಿಗೆ ಒಂದು ಬಗೆಹರಿಯದ ಒಗಟಾಗಿಯೇ ಉಳಿದಿದ್ದ.
ಮುಂಬೈ ಟು ಗೋವಾ: ಗುರುತು ಬದಲಿಸಿದ್ದ ಕಿಲಾಡಿ!
ಜೈಲಿನಿಂದ ತಪ್ಪಿಸಿಕೊಂಡ ನಂತರ ಚನ್ನಕೇಶವ ಒಂದೆಡೆ ನೆಲೆ ನಿಲ್ಲಲಿಲ್ಲ. ತನ್ನ ಗುರುತನ್ನು ಮರೆಮಾಚಲು ಮುಂಬೈನಂತಹ ಮಹಾನಗರಗಳಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಪೊಲೀಸರ ದಾರ ತಪ್ಪಿಸುತ್ತಿದ್ದ. ಹದಿನೈದು ವರ್ಷಗಳಿಂದ ಪೊಲೀಸರು ಈತನ ನೆರಳನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಈತ ಗೋವಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರ ಕೈಸೇರಿತು.
ಖಾಕಿ ಪಡೆಯ 'ಮಿಂಚಿನ' ಕಾರ್ಯಾಚರಣೆ
ಹಾಸನ ಎಸ್ಪಿ ಶುಭಾನ್ವಿತಾ ಅವರ ಚಾಣಾಕ್ಷ ನಿರ್ದೇಶನದಲ್ಲಿ, ಎಎಸ್ಪಿಗಳಾದ ತಮ್ಮಯ್ಯ ಹಾಗೂ ಶ್ರೀನಿಧಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆಯಾಯಿತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಗಳಾದ ರವಿ ಕಬ್ಬತ್ತಿ, ಸೋಮಶೇಖರ ಹಾಗೂ ಬಸವರಾಜು ಅವರು ಗೋವಾಕ್ಕೆ ತೆರಳಿ, ಅತ್ಯಂತ ನಾಜೂಕಿನಿಂದ ಕಾರ್ಯಾಚರಣೆ ನಡೆಸಿ ಕೇಶವನನ್ನು ಸುತ್ತುವರಿದರು.
ತಾನು ಸುರಕ್ಷಿತವಾಗಿದ್ದೇನೆ ಎಂದು ಬೀಗುತ್ತಿದ್ದ ಆರೋಪಿಗೆ ಖಾಕಿ ಪಡೆ ತನ್ನ ಮುಂದೆ ನಿಂತಾಗ ಒಂದು ಕ್ಷಣ ದಿಕ್ಕೇ ತೋಚದಂತಾಗಿತ್ತು. ಸದ್ಯ 15 ವರ್ಷಗಳ ಬಳಿಕ ಈ 'ಖದೀಮ'ನಿಗೆ ಮತ್ತೆ ಜೈಲಿನ ದಾರಿ ತೋರಿಸುವ ಮೂಲಕ ಹಾಸನ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ









Comments
Leave a Comment