ಬಡವರ ಕಷ್ಟದ ನಡುವೆ ಜನಪ್ರತಿನಿಧಿಯ ಐಷಾರಾಮಿ ಬದುಕು ಎಷ್ಟು ಸರಿ ಎಂಬ ಪ್ರಶ್ನೆ; ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್
ದೆಹಲಿ : ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಬೇಕಿದ್ದ ಜನಪ್ರತಿನಿಧಿಯೊಬ್ಬರು, ಬಡವರ ಹಸಿವು ಮತ್ತು ಸಂಕಷ್ಟಗಳ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಐಷಾರಾಮಿ ವಸ್ತುಗಳೊಂದಿಗೆ ಮೆರೆಯುತ್ತಿರುವುದು ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಹಿಡಿದುಕೊಂಡಿದ್ದ ಬಿಳಿ ಬಣ್ಣದ ಹರ್ಮೆಸ್ ಬ್ಯಾಗ್ ಈಗ ವಿವಾದದ ಕಿಚ್ಚು ಹಚ್ಚಿದೆ. ಈ ಬ್ಯಾಗ್‌ನ ಬೆಲೆ ಅಂದಾಜು 5 ಲಕ್ಷ ರೂಪಾಯಿ ಎನ್ನಲಾಗುತ್ತಿದ್ದು, ದೇಶದ ಸಾಮಾನ್ಯ ಪ್ರಜೆಯೊಬ್ಬನ ಇಡೀ ವರ್ಷದ ದುಡಿಮೆಗಿಂತಲೂ ಅಧಿಕ ಮೊತ್ತವನ್ನು ಕೇವಲ ಒಂದು ಬ್ಯಾಗ್‌ಗಾಗಿ ವ್ಯಯಿಸಿರುವುದು ಇವರ 'ಜನಸೇವೆಯ' ಬದ್ಧತೆಯನ್ನು ಪ್ರಶ್ನಿಸುವಂತಿದೆ.
ಒಂದೆಡೆ ಗೋಮಾತೆಯನ್ನು ಪೂಜಿಸುವ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಭಾಷಣ ಮಾಡುವ ಕಂಗನಾ, ಗೋವಿನ ಚರ್ಮದಿಂದ ತಯಾರಿಸಲ್ಪಟ್ಟಿದೆ ಎನ್ನಲಾದ ವಿದೇಶಿ ಕಂಪನಿಯ ಬ್ಯಾಗ್ ಹಿಡಿದು ಓಡಾಡುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹರ್ಮೆಸ್ ವಚೆ ಹಂಟರ್ ಎಂಬ ಫ್ರಾನ್ಸ್ ಮೂಲದ ಕಂಪನಿಯು ಗೋವಿನ ಚರ್ಮ ಬಳಸಿ ಇಂತಹ ಬ್ಯಾಗ್‌ಗಳನ್ನು ಸಿದ್ಧಪಡಿಸುತ್ತದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕಾವೇರಿದೆ. ಸದಾ ಹಿಂದೂ ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಪಾಠ ಮಾಡುವ ಸಂಸದೆಯ ಈ ದ್ವಂದ್ವ ನಿಲುವು ಈಗ ಜಗಜ್ಜಾಹೀರಾಗಿದೆ.
ಬಡವರ ಮುಂದೆ ಇಂತಹ ದುಬಾರಿ ವಸ್ತುಗಳ ಪ್ರದರ್ಶನ ಬೇಕಿತ್ತೇ? ಜನರ ತೆರಿಗೆ ಹಣದಲ್ಲಿ ಅಥವಾ ಜನರ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಸರಳತೆಯೇ ಮಂತ್ರವಾಗಬೇಕಿದ್ದ ಸಂಸದೆಗೆ ಈ ಮಟ್ಟದ ಹಮ್ಮು-ಬಿಮ್ಮು ಅಗತ್ಯವಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ. ಸಂಸದೆಯೊಬ್ಬರು ಬಡ ಜನರ ನೋವಿಗೆ ಸ್ಪಂದಿಸುವ ಬದಲು, ಲಕ್ಷಾಂತರ ರೂಪಾಯಿ ಬೆಲೆಯ ಚರ್ಮದ ಚೀಲ ಹಿಡಿದು ಶೋಕಿ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಪಾಳಮೋಕ್ಷ ಮಾಡಿದಂತಿದೆ. ಅಭಿಮಾನಿಗಳು ಎಷ್ಟೇ ಸಮರ್ಥನೆ ನೀಡಿದರೂ, ಗೋವಿನ ಚರ್ಮದ ಬಳಕೆಯ ಆರೋಪ ಮತ್ತು ಸಾಮಾನ್ಯರ ಬದುಕಿನ ಮೇಲಿನ ಅಣಕಕ್ಕೆ ಕಂಗನಾ ಉತ್ತರ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.









Comments
Leave a Comment