ಪ್ರಾಣ ರಕ್ಷಕನ ‘ಸೈಕೋ’ ಕೃತ್ಯ: ಪ್ರತಿಸ್ರ್ಧಿಯ ಕಾರು, ಬೈಕುಗಳು ಭಸ್ಮ; ಸಿಸಿಟಿವಿಯಲ್ಲಿ ಸೆರೆಯಾಯ್ತು ಡಾಕ್ಟರ್ ಮುಖವಾಡ!
ಕೊರಟಗೆರೆ : ಸಮಾಜದಲ್ಲಿ ದೇವರ ಸಮಾನವಾಗಿ ಕಾಣಬೇಕಾದ ವೈದ್ಯನೊಬ್ಬ ದ್ವೇಷದ ಕಿಚ್ಚಿಗೆ ಬಲಿಯಾಗಿ ಜೈಲು ಸೇರಿರುವ ಘಟನೆ ತುಮಕೂರು ಜಿಲ್ಲೆಯ ಕೋಳಾಲದಲ್ಲಿ ನಡೆದಿದೆ. ಕಲ್ಯಾಣ ಮಂಟಪದ ವ್ಯವಹಾರದಲ್ಲಿ ಉಂಟಾದ ಪೈಪೋಟಿ ಮತ್ತು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ, ಎಂಬಿಬಿಎಸ್ ವೈದ್ಯನೊಬ್ಬ ತನ್ನ ಪ್ರತಿಸ್ರ್ಧಿಯ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಕೃತ್ಯ ಈಗ ಬಯಲಾಗಿದೆ.. ಕೋಳಾಲದ ಕೆಸಿಎನ್ ಭಾರತ್ ಗ್ಯಾಸ್ ಏಜೆನ್ಸಿ ಹಾಗೂ ಕಲ್ಯಾಣ ಮಂಟಪದ ಮಾಲೀಕರಾದ ವಿರೂಪಾಕ್ಷ ಎಂಬುವವರ ಮನೆ ಮುಂದೆ ಕಳೆದ ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿತ್ತು. ಇಡೀ ಗ್ರಾಮವೇ ಗಾಢ ನಿದ್ರೆಯಲ್ಲಿದ್ದಾಗ ಮುಸುಕುಧಾರಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಒಂದು ಮಹೀಂದ್ರಾ ಕಾರು, ಬುಲೆಟ್ ಹಾಗೂ ಓಲಾ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಕ್ಷಣಾರ್ಧದಲ್ಲಿ ವಾಹನಗಳು ಧಗಧಗನೆ ಹೊತ್ತಿ ಉರಿದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.ಗಂಭೀರವಾಗಿ ಪರಿಗಣಿಸಿದ ತುಮಕೂರು ಎಸ್ಪಿ ಅಶೋಕ್ ಕೆ.ವಿ ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸ್ಐ ಅಭಿಷೇಕ್ ನೇತೃತ್ವದ ತಂಡ ರಚಿಸಿದ್ರು.. ಈ ತಂಡ ಸಿಸಿ ಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದೆ. ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಬೇರೆ ಯಾರೂ ಅಲ್ಲ, ಕುಣಿಗಲ್‌ನಲ್ಲಿ ಕ್ಲಿನಿಕ್ ನಡೆಸುತ್ತಿರುವ ಹಾಗೂ ಕೋಳಾಲದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದ ಮಾಲೀಕರೂ ಆಗಿರುವ ಡಾ. ನಾಗಭೂಷಣ್ ಹೆಚ್.ಆರ್. ಎಂಬುದು ದೃಢಪಟ್ಟಿದೆ.ನಾಗಭೂಷಣ್ ಹಾಗೂ ವಿರೂಪಾಕ್ಷ ಇಬ್ಬರೂ ಕೋಳಾಲ ಗ್ರಾಮದಲ್ಲಿ ಕಲ್ಯಾಣ ಮಂಟಪಗಳನ್ನು ಹೊಂದಿದ್ದಾರೆ. ಆದರೆ, ವಿರೂಪಾಕ್ಷ ಅವರ ಮಂಟಪಕ್ಕೆ ಅತಿ ಹೆಚ್ಚು ಮದುವೆ ಹಾಗೂ ಶುಭ ಸಮಾರಂಭಗಳ ಆರ್ಡರ್‌ಗಳು ಸಿಗುತ್ತಿದ್ದವು. ಇದರಿಂದ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದ ಡಾ. ನಾಗಭೂಷಣ್, ವಿರೂಪಾಕ್ಷ ಅವರ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ಇದೇ ಹತಾಶೆಯಲ್ಲಿ ತುಮಕೂರಿನಿಂದ ಪೆಟ್ರೋಲ್ ಖರೀದಿಸಿ ತಂದು ರಾತ್ರೋರಾತ್ರಿ ಈ ಕೃತ್ಯ ಎಸಗಿದ್ದಾನೆ. ವೈದ್ಯನನ್ನು ಬಂಧಿಸಿರುವ ಕೋಳಾಲ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. "ಕಷ್ಟಪಟ್ಟು ಓದಿ ವೈದ್ಯನಾಗಿ ಜನರ ಪ್ರಾಣ ಉಳಿಸಬೇಕಾದವನು, ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ" ಎಂದು ಸಂತ್ರಸ್ತ ವಿರೂಪಾಕ್ಷ ನೋವು ತೋಡಿಕೊಂಡಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.









Comments
Leave a Comment