ಧಾರವಾಡ ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡದ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿ ಅಪರಾಧಿಗಳಿಗೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಈ ಸುದೀರ್ಘ ವಿಚಾರಣೆಯ ಅಂತ್ಯದಲ್ಲಿ ತೀರ್ಪು ಪ್ರಕಟಿಸಿದ್ದು, ವಿನಯ್ ಕುಲಕರ್ಣಿ ಮತ್ತು ಇತರ 15 ಸಹಚರರಿಗೆ ಕೊಲೆ ಹಾಗೂ ಕ್ರಿಮಿನಲ್ ಪಿತೂರಿ ನಡೆಸಿದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಇದೇ ಪ್ರಕರಣದ 19ನೇ ಅಪರಾಧಿ ಚೆನ್ನಕೇಶವ ಟಿಂಗರಿಕರ್ ಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದ್ದು, ಹತ್ಯೆಗೀಡಾದ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಆರಂಭದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣ ಸಿಬಿಐ ಕೈಗೆ ಸೇರಿತ್ತು. ತನಿಖೆ ತೀವ್ರಗೊಳಿಸಿದ್ದ ಸಿಬಿಐ, ಇದು ರಾಜಕೀಯ ಪ್ರೇರಿತ ಕೊಲೆ ಎಂದು ಸಾಬೀತುಪಡಿಸಿ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.
ಸುಮಾರು ಎಂಟು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಇಂದು ಅಂತಿಮ ತೀರ್ಪು ಹೊರಬಿದ್ದಿದ್ದು, ದೋಷಿಗಳಿಗೆ ಪ್ರತಿ ಸೆಕ್ಷನ್ ಅಡಿಯಲ್ಲಿ ಪ್ರತ್ಯೇಕವಾಗಿ ದಂಡವನ್ನೂ ವಿಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೈಲು ಕೈಪಿಡಿಯ ನಿಯಮದಂತೆ ಅಗತ್ಯ ಸೌಲಭ್ಯ ಹಾಗೂ ಬಟ್ಟೆಗಳನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಈ ತೀರ್ಪು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.









Comments
Leave a Comment