ನಿರ್ಲಕ್ಷ್ಯ ಅಮಾಯಕರ ಇಬ್ಬರ ಬಲಿ
ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಬಳಿ ನಡೆದ ದಾರುಣ ಘಟನೆಯಲ್ಲಿ, ಕಲ್ಲು ಗಣಿಗಾರಿಕೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಲ್ಯಾಣ ಶೆಟ್ಟಿ ಅಸೋಸಿಯೇಷನ್ ಮಾಲಿಕತ್ವದ ಗಣಿಗಾರಿಕೆಯಲ್ಲಿ ನಡೆದಿದ್ದು, ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ.
ಮೃತರನ್ನು ಜಾರ್ಖಂಡ್ ರಾಜ್ಯದ ರವಿಕುಮಾರ್ ಸಿಂಗ್ (18), ಹಿಟಾಚಿ ಚಾಲಕ, ಮತ್ತು ಸುಭಾಷ್ ಸಿಂಗ್ (18), ಸಹಾಯಕ ಎಂದು ಗುರುತಿಸಲಾಗಿದೆ. ಕಲ್ಲು ಗಣಿಗಾರಿಕೆ ಸ್ಥಳದಲ್ಲಿ 11 ಕೆವಿ ವಿದ್ಯುತ್ ಸಂಪರ್ಕವನ್ನು ಪಡೆದಿದ್ದ ಗಣಿಗಾರಿಕೆ ಮಾಲೀಕರು, ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಘಟನೆ ನಡೆದ ಸಂದರ್ಭದಲ್ಲಿ, ಹಿಟಾಚಿ ಯಂತ್ರದ ಬಕೆಟ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ಇಬ್ಬರು ಕಾರ್ಮಿಕರು ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹಿಟಾಚಿಯಿಂದ ಕೆಳಗೆ ಜಿಗಿದರೂ, ಸಮೀಪದಲ್ಲಿದ್ದ ನೀರಿನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೆಲಸ ಅರಸಿ ಜಾರ್ಖಂಡ್‌ನಿಂದ ಬಂದಿದ್ದ ಈ ಇಬ್ಬರು ಯುವ ಕಾರ್ಮಿಕರ ದುರ್ಮರಣಕ್ಕೆ ಗಣಿಗಾರಿಕೆ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾರ್ಮಿಕರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಘಟನೆ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.









Comments
Leave a Comment