ರಾಜ ಶಿವಾಜಿ' ಟ್ರೇಲರ್ ಲಾಂಚ್‌ನಲ್ಲಿ ಭಾವುಕ ಕ್ಷಣ; ಸತಿ-ಪತಿಯ ಪ್ರೇಮಕ್ಕೆ ಸಾಕ್ಷಿಯಾದ ಮುಂಬೈ ಅಂಗಳ
ಮುಂಬೈ:
ಚಿತ್ರರಂಗದ ಮಾದರಿ ದಂಪತಿ ಎಂದೇ ಕರೆಸಿಕೊಳ್ಳುವ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದ್ದಾರೆ. ರಿತೇಶ್ ಅವರ ಬಹುಕಾಲದ ಕನಸಿನ ಚಿತ್ರ ‘ರಾಜ ಶಿವಾಜಿ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಪತಿಯ ಪರಿಶ್ರಮ ಹಾಗೂ ಅವರು ಪಟ್ಟ ಕಷ್ಟದ ಮಾತುಗಳನ್ನು ಕೇಳಿ ಜೆನಿಲಿಯಾ ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.
ಕನಸಿನ ಪ್ರಾಜೆಕ್ಟ್‌ಗೆ ರಿತೇಶ್ ಶ್ರಮ:
ಮರಾಠ ಸಾಮ್ರಾಜ್ಯದ ಧೀಮಂತ ನಾಯಕ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ರಿತೇಶ್ ದೇಶ್‌ಮುಖ್ ಅವರೇ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಅವರ ವೃತ್ತಿಜೀವನದ ಅತಿದೊಡ್ಡ ಮೈಲಿಗಲ್ಲು. ಏಪ್ರಿಲ್ 20ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ರಿತೇಶ್, ಈ ಸಿನಿಮಾ ಜರ್ನಿಯಲ್ಲಿ ತಮಗೆ ಬೆಂಬಲ ನೀಡಿದವರನ್ನು ನೆನೆದು ಗದ್ಗದಿತರಾದರು.
"ನನ್ನ ಈ ಸುದೀರ್ಘ ಪಯಣದಲ್ಲಿ ಹೆಜ್ಜೆ ಹೆಜ್ಜೆಗೂ ಶಕ್ತಿಯಾಗಿ ನಿಂತವಳು ಜೆನಿಲಿಯಾ" ಎಂದು ರಿತೇಶ್ ಹೇಳುತ್ತಿದ್ದಂತೆ, ಪಕ್ಕದಲ್ಲೇ ನಿಂತಿದ್ದ ಜೆನಿಲಿಯಾ ಕಣ್ಣೀರು ತಡೆಯಲಾಗದೆ ಭಾವುಕರಾದರು. ಈ ದೃಶ್ಯ ಅಲ್ಲಿದ್ದ ಅತಿಥಿಗಳಾದ ಸಂಜಯ್ ದತ್ ಸೇರಿದಂತೆ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿತು.
ಕನ್ನಡಿಗರ ಪ್ರೀತಿಯ ಜೆನಿಲಿಯಾ:
ಪರಭಾಷಾ ನಟಿಯಾದರೂ ಜೆನಿಲಿಯಾ ಕನ್ನಡಿಗರಿಗೆ ಚಿರಪರಿಚಿತ. 2008ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಸತ್ಯ ಇನ್ ಲವ್’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ಅವರು, ಇತ್ತೀಚೆಗೆ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.
ಮೇ 1ಕ್ಕೆ ಗ್ರ್ಯಾಂಡ್ ರಿಲೀಸ್:
ಮುಂಬೈ ಫಿಲ್ಮ್ ಕಂಪನಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ಜಿಯೋ ಸ್ಟುಡಿಯೋಸ್ ಅರ್ಪಿಸುತ್ತಿರುವ ‘ರಾಜ ಶಿವಾಜಿ’ ಚಿತ್ರವು ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೇ 1ರಂದು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.









Comments
Leave a Comment