ಬೆಂಗಳೂರಿಗರೇ ಎಚ್ಚರ! ಇನ್ಮುಂದೆ 'ನಾಲ್ಕು ಬುಟ್ಟಿ' ಕಸ ವಿಂಗಡಣೆ ಕಡ್ಡಾಯ

Bengaluru Division:

Font size:

ಮನೆ ಮನೆ ಕಸಕ್ಕೆ ಹೊಸ ನಿಯಮ: ವಿಂಗಡನೆಯಲ್ಲಿ ಎಡವಿದರೆ ಕಸದ ಗಾಡಿ ನಿಮ್ಮ ಮನೆ ಮುಂದೆ ನಿಲ್ಲಲ್ಲ!

ಬೆಂಗಳೂರು:

ಬೆಂಗಳೂರು ನಗರದ ಕಸದ ಸಮಸ್ಯೆಗೆ ಬ್ರೇಕ್ ಹಾಕಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಅಸ್ತ್ರವೊಂದನ್ನು ಹೊರತೆಗೆದಿದೆ. ಇನ್ನು ಮುಂದೆ ರಾಜಧಾನಿಯ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸ ಎಂದು ಎರಡಲ್ಲ, ಬದಲಿಗೆ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನೀಡುವುದು ಕಡ್ಡಾಯ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಎಸ್‌ಡಬ್ಲ್ಯೂಎಂಎಲ್ ನಿರ್ಧರಿಸಿದೆ.

​ಹೊಸ ಮಾರ್ಗಸೂಚಿಯ ಪ್ರಕಾರ, ಸಾರ್ವಜನಿಕರು ಕಸವನ್ನು ಈ ಕೆಳಗಿನಂತೆ ವರ್ಗೀಕರಿಸಬೇಕು:

  • ಹಸಿ ತ್ಯಾಜ್ಯ: ಅಡುಗೆ ಮನೆಯ ಆಹಾರ ಪದಾರ್ಥಗಳು.
  • ಒಣ ತ್ಯಾಜ್ಯ: ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್, ಪೇಪರ್ ಇತ್ಯಾದಿ.
  • ನೈರ್ಮಲ್ಯ ತ್ಯಾಜ್ಯ: ಸ್ಯಾನಿಟರಿ ಪ್ಯಾಡ್, ಡೈಪರ್‌ಗಳಂತಹ ವೈಯಕ್ತಿಕ ನೈರ್ಮಲ್ಯದ ವಸ್ತುಗಳು.
  • ವಿಶೇಷ ಕಾಳಜಿಯ ತ್ಯಾಜ್ಯ: ವಿಲೇವಾರಿಗೆ ವಿಶೇಷ ಮುನ್ನೆಚ್ಚರಿಕೆ ಬೇಕಿರುವ ಅಪಾಯಕಾರಿ ವಸ್ತುಗಳು.

ಡಿಜಿಟಲ್ ಕಣ್ಗಾವಲು ಮತ್ತು ಪಾರದರ್ಶಕತೆ:

ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮೇಲ್ವಿಚಾರಣೆ ಮಾಡಲು ಬಿಎಸ್‌ಡಬ್ಲ್ಯೂಎಂಎಲ್ ಶೀಘ್ರದಲ್ಲೇ ಒಂದು ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಲೋಕಾರ್ಪಣೆ ಮಾಡಲಿದೆ. ಇದರಿಂದ ನಗರದ ಯಾವ ಭಾಗದಲ್ಲಿ ಎಷ್ಟು ಕಸ ಸಂಗ್ರಹವಾಗುತ್ತಿದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ಅಪಾರ್ಟ್‌ಮೆಂಟ್‌ಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ 'ವಿಸ್ತರಿತ ಬೃಹತ್ ತ್ಯಾಜ್ಯ ಉತ್ಪಾದಕರ ಹೊಣೆಗಾರಿಕೆ' ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

​"ಬೆಂಗಳೂರನ್ನು ವೈಜ್ಞಾನಿಕವಾಗಿ ಸ್ವಚ್ಛ ನಗರವನ್ನಾಗಿ ಮಾಡಲು ಈ ಹೆಜ್ಜೆ ಇರಿಸಲಾಗಿದೆ. ಸಾರ್ವಜನಿಕರು ಈ ಹೊಸ ಬದಲಾವಣೆಗೆ ಸಹಕರಿಸಬೇಕು" ಎಂದು ಬಿಎಸ್‌ಡಬ್ಲ್ಯೂಎಂಎಲ್ ಸಿಇಒ ಕರಿಗೌಡ ತಿಳಿಸಿದ್ದಾರೆ. ನಿಯಮ ಪಾಲನೆಯಲ್ಲಿ ಪಾರದರ್ಶಕತೆ ತರಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (RWA) ಜೊತೆ ಈಗಾಗಲೇ ಸಮಾಲೋಚನೆ ಆರಂಭಿಸಲಾಗಿದೆ.

Comments

Leave a Comment

Prev Post ರಾಜ್ಯಸಭೆಯ ಸಚಿವಾಲಯದ ಕಾರ್ಯದರ್ಶಿಯಾಗಿ ಕೋಲಾರದ ಕೆ.ಎಸ್. ಸೋಮಶೇಖರ್ ನೇಮಕ: ಈ ಸಾಧನೆ ಮಾಡಿದ ಕರುನಾಡಿನ ಮೊದಲ ಅಧಿಕಾರಿ!
Next Post ಬೆಂಗಳೂರು ಟ್ರಾಫಿಕ್ ಕಿರಿಕಿರಿಗೆ ಮುಕ್ತಿ: ಯಶವಂತಪುರ - ಕೆ.ಆರ್. ಪುರಂ ನಡುವೆ ಹೈಟೆಕ್ ಎಲಿವೇಟೆಡ್ ಕಾರಿಡಾರ್!