18 ತಿಂಗಳ ಹಸುಗೂಸನ್ನು ಅನಾಥವಾಗಿಸಿದ ಪತಿಯ ಕ್ರೌರ್ಯ: ಬೆಂಗಳೂರಿನ ಜೆ.ಪಿ. ನಗರದಲ್ಲಿ ಮನಕಲಕುವ ಘಟನೆ
ಬೆಂಗಳೂರು: ಪ್ರೀತಿಸಿ, ದೊಡ್ಡವರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೊಬ್ಬರು, ಪತಿ ಮತ್ತು ಮನೆಯವರ ನಿರಂತರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ಜೆ.ಪಿ. ನಗರದ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದ್ದು, 29 ವರ್ಷದ ಭುವನೇಶ್ವರಿ ಎಂಬುವವರೇ ಮೃತ ದುರ್ದೈವಿ.
ಘಟನೆಯ ವಿವರ:
ಮೃತ ಭುವನೇಶ್ವರಿ ಹಾಗೂ ತಮಿಳುನಾಡು ಮೂಲದ ಹರೀಶ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. 2022ರ ನವೆಂಬರ್‌ನಲ್ಲಿ ಇವರ ವಿವಾಹವು ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನೆರವೇರಿತ್ತು. ಮದುವೆಯ ಆರಂಭದಲ್ಲಿ ಸುಖವಾಗಿದ್ದ ಸಂಸಾರದಲ್ಲಿ ಕೆಲವೇ ದಿನಗಳಲ್ಲಿ ವರದಕ್ಷಿಣೆಯ ಕಿಚ್ಚು ಹತ್ತಿಕೊಂಡಿದೆ. ಮದುವೆಯಲ್ಲಿ ನೀಡಿದ್ದ ಚಿನ್ನಾಭರಣಗಳ ಹೊರತಾಗಿ, ಭುವನೇಶ್ವರಿಯ ಸಂಬಳದ ಬಹುಭಾಗವನ್ನು ಕಿತ್ತುಕೊಳ್ಳುತ್ತಿದ್ದ ಪತಿ ಹಾಗೂ ಆತನ ಮನೆಯವರು, ತವರಿನಿಂದ ಹೆಚ್ಚುವರಿ ಹಣ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.
ವಿಚ್ಛೇದನಕ್ಕೆ ಒತ್ತಡ, ಜೀವ ಬೆದರಿಕೆ:
ಕಳೆದ ಏಳು ತಿಂಗಳಿನಿಂದ ಪತಿ ಹರೀಶ್, 18 ತಿಂಗಳ ಮಗು ಹಾಗೂ ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ನಡುವೆ ಭುವನೇಶ್ವರಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಸತತ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಮಗುವಿಗೆ ಅನಾರೋಗ್ಯ ಉಂಟಾದಾಗಲೂ ಕಣ್ಣೆತ್ತಿ ನೋಡದ ಹರೀಶ್, ಇತ್ತೀಚೆಗೆ ತನ್ನ ತಂದೆ ನಿಧನರಾದಾಗಲೂ ಅಂತ್ಯಕ್ರಿಯೆಗೆ ಬರಲು ಪತ್ನಿಗೆ ಅವಕಾಶ ನೀಡದೆ ಅವಮಾನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಂದೆಯ ಆಕ್ರೋಶ: "ನನ್ನ ಮಗಳಿಗೆ ಹಣಕ್ಕಾಗಿ ಮತ್ತು ವರದಕ್ಷಿಣೆಗಾಗಿ ಪತಿ ಹರೀಶ್ ಹಾಗೂ ಆತನ ಮನೆಯವರು ನರಕಯಾತನೆ ನೀಡಿದ್ದಾರೆ. ಆಕೆಯ ಸಂಬಳದ ಹಣವನ್ನೂ ಬಿಡದೆ ಪೀಡಿಸುತ್ತಿದ್ದರು. ನನ್ನ ಮಗಳ ಸಾವಿಗೆ ಪತಿ ಹರೀಶ್, ಆತನ ತಾಯಿ ಮತ್ತು ಸಹೋದರನೇ ನೇರ ಹೊಣೆ," ಎಂದು ಮೃತರ ತಂದೆ ಅಂಬಳಗನ್ ಕಣ್ಣೀರಿಟ್ಟಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ಸೋಮವಾರ ಭುವನೇಶ್ವರಿ ಅವರು ಪದೇ ಪದೇ ಮಾಡುತ್ತಿದ್ದ ಕರೆಗಳನ್ನು ಸ್ವೀಕರಿಸದಿದ್ದಾಗ ಆಕೆಯ ಸ್ನೇಹಿತೆ ಅನುಮಾನಗೊಂಡಿದ್ದಾರೆ. ಕೂಡಲೇ ಭುವನೇಶ್ವರಿಯ ತಾಯಿಗೆ ಮಾಹಿತಿ ನೀಡಿದ್ದು, ತಾಯಿ ಮನೆಗೆ ಬಂದು ನೋಡಿದಾಗ ಸಾಫ್ಟ್‌ವೇರ್ ಎಂಜಿನಿಯರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಮೃತಳ ತಂದೆ ಅಂಬಳಗನ್ ನೀಡಿದ ದೂರಿನನ್ವಯ ಪತಿ ಹರೀಶ್ ಕುಮಾರ್, ಅತ್ತೆ ಹಾಗೂ ಮಾವನ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಐಟಿ ನಗರಿಯಲ್ಲಿ ನಡೆದ ಈ ಘಟನೆಯು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.









Comments
Leave a Comment