ಅಪ್ಪನ ಜೊತೆ ಅಂಗಡಿಗೆ ಬಂದಿದ್ದೇ ತಪ್ಪಾಯಿತೇ?; ರಜೆ ಖುಷಿಯಲ್ಲಿದ್ದ ಬಾಲಕನನ್ನು ಬಲಿಪಡೆದ ವೇಗಿ ಕಾರು
ನಿಟ್ಟೂರು: ಶಾಲೆಗೆ ರಜೆ ಇತ್ತು.. ಮನೆಯಲ್ಲಿದ್ದರೆ ಬೋರ್ ಆಗುತ್ತದೆ ಎಂದು ಅಪ್ಪನ ಜೊತೆ ಖುಷಿಯಿಂದ ಅಂಗಡಿಗೆ ಬಂದಿದ್ದ ಆ ಬಾಲಕನಿಗೆ ಅದೇ ಕೊನೆಯ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಕಂದನ ಮೇಲೆ ಎಲೆಕ್ಟ್ರಿಕ್ ಕಾರೊಂದು ಯಮಸ್ವರೂಪಿಯಾಗಿ ಹರಿದಿದ್ದು, 13 ವರ್ಷದ ಬಾಲಕ ಶೋಭಿತ್ ರಾಘವ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ.
ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಈ ಎದೆ ನಡುಗಿಸುವ ಘಟನೆ ನಡೆದಿದೆ. ನಿಟ್ಟೂರಿನ 'ರಾಘವೇಂದ್ರ ಟೆಕ್ಸ್‌ಟೈಲ್ಸ್' ಜವಳಿ ಅಂಗಡಿಯ ಮಾಲೀಕ ರಾಘವೇಂದ್ರ ಅವರ ಮುದ್ದಿನ ಮಗ ಶೋಭಿತ್ ಈಗ ನೆನಪು ಮಾತ್ರ.
ಕಣ್ಣೆದುರೇ ಮಗನ ಅಂತ್ಯ; ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ
ಬೇಸಿಗೆ ರಜೆ ಇದ್ದ ಕಾರಣ ಮಗುವನ್ನು ಒಬ್ಬನೇ ಬಿಡಲು ಮನಸ್ಸಿಲ್ಲದೆ ಪೋಷಕರು ಇಂದು ಬೆಳಿಗ್ಗೆ ತಮ್ಮ ಜವಳಿ ಅಂಗಡಿಗೆ ಕರೆದುಕೊಂಡು ಬಂದಿದ್ದರು. ಅಂಗಡಿಯ ಮುಂಭಾಗದಲ್ಲೇ ತನ್ನ ಪುಟ್ಟ ಸೈಕಲ್ ಮೇಲೆ ಕುಳಿತು ಶೋಭಿತ್ ಆಟವಾಡುತ್ತಿದ್ದನು. ಈ ವೇಳೆ ಅತೀ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಸೈಕಲ್ ಮೇಲೆಯೇ ಹರಿದಿದೆ.
ಆಸ್ಪತ್ರೆ ತಲುಪುವ ಮುನ್ನವೇ ನಿಂತಿತು ಜೀವದ ಮಿಡಿತ
ಅಪಘಾತದ ಭೀಕರತೆಗೆ ಬಾಲಕ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣವೇ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ವಿಧಿಯಾಟ ಬೇರೆಯೇ ಇತ್ತು. ಆಸ್ಪತ್ರೆಯ ಮೆಟ್ಟಿಲು ಹತ್ತುವ ಮುನ್ನವೇ ಮಗು ಕೊನೆಯುಸಿರೆಳೆದಿದ್ದಾನೆ. ಮಗನ ಆಟವನ್ನು ನೋಡುತ್ತಾ ವ್ಯಾಪಾರದಲ್ಲಿ ತೊಡಗಿದ್ದ ತಂದೆ, ತನ್ನ ಕಣ್ಣೆದುರೇ ಮಗ ಶವವಾಗಿ ಬಿದ್ದಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ.
ಪೊಲೀಸರ ಭೇಟಿ; ಚಾಲಕನ ವಿರುದ್ಧ ದೂರು
ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಸಾವಿಗೆ ಕಾರಣವಾದ ಎಲೆಕ್ಟ್ರಿಕ್ ಕಾರು ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ನಿರ್ಲಕ್ಷ್ಯದ ಚಾಲನೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಸ್ತೆ ಬದಿಯಲ್ಲಿ ಆಟವಾಡುವ ಕಂದಮ್ಮಗಳಿಗೂ ರಕ್ಷಣೆ ಇಲ್ಲದಂತಾಯಿತೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









Comments
Leave a Comment