ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶ; ಯುದ್ಧ ಭೂಮಿಗೆ ಧಾವಿಸಿದ 10,000 ಅಮೆರಿಕನ್ ಸೈನಿಕರು – ಮಧ್ಯಪ್ರಾಚ್ಯದಲ್ಲಿ ಅಣುಬಾಂಬ್ ಭೀತಿ!
ವಾಷಿಂಗ್ಟನ್/ಟೆಹ್ರಾನ್: ಜಗತ್ತು ಮತ್ತೊಂದು ಮಹಾಯುದ್ಧದ ಅಂಚಿನಲ್ಲಿ ಬಂದು ನಿಂತಿದೆಯೇ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪೋಸ್ಟ್ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. "ನಮ್ಮ ಒಪ್ಪಂದಕ್ಕೆ ಸಹಿ ಹಾಕಿ, ಇಲ್ಲವೇ ಇರಾನ್ ಭೂಪಟದಿಂದಲೇ ನಾಶವಾಗಲು ಸಿದ್ಧರಾಗಿ" ಎನ್ನುವ ಅರ್ಥದಲ್ಲಿ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಅಂತಾರಾಷ್ಟ್ರೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ ಅಕ್ಷರಶಃ ಬೆಂಕಿಯುಗುಳಿರುವ ಟ್ರಂಪ್, ಇರಾನ್ ವಿರುದ್ಧ ಆಕ್ರಮಣಕಾರಿ ಆಟಕ್ಕೆ ನಾಂದಿ ಹಾಡಿದ್ದಾರೆ. ಖಾರ್ಗ್ ದ್ವೀಪಕ್ಕೆ ಕುತ್ತು: ಇರಾನ್‌ನ ತೈಲ ಕೇಂದ್ರವಾದ ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಧೂಳೀಪಟ ಮಾಡುವುದಾಗಿ ಟ್ರಂಪ್ ಘೋಷಿಸಿದ್ದಾರೆ. ವಿದ್ಯುತ್ ಸ್ಥಾವರಗಳ ಮೇಲೆ ಕಣ್ಣು: ಇಡೀ ಇರಾನ್ ಅನ್ನು ಕತ್ತಲೆಯಲ್ಲಿ ಮುಳುಗಿಸಲು ಅಲ್ಲಿನ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಲಾಗಿದೆ. ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿ: ವಿಶ್ವದ ತೈಲ ಸಾಗಣೆಯ ಜೀವನಾಡಿ ಎನಿಸಿರುವ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸದಿದ್ದರೆ ಇರಾನ್ ಅಸ್ತಿತ್ವಕ್ಕೇ ಧಕ್ಕೆ ತರುವುದಾಗಿ ಅವರು ಗುಡುಗಿದ್ದಾರೆ. "47 ವರ್ಷಗಳ ಭಯೋತ್ಪಾದನಾ ಆಳ್ವಿಕೆಯಲ್ಲಿ ನೀವು ನಮ್ಮ ಸೈನಿಕರನ್ನು ಕೊಂದಿದ್ದೀರಿ. ಈಗ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ. ಇದು ನಮ್ಮ ಅಂತಿಮ ತೀರ್ಮಾನ!"
ಕೇವಲ ಮಾತಿನಲ್ಲಷ್ಟೇ ಅಲ್ಲ, ಅಮೆರಿಕ ತನ್ನ ಶಕ್ತಿಯನ್ನು ರಣಭೂಮಿಗೆ ಇಳಿಸಿದೆ. ಟ್ರಂಪ್ ಎಚ್ಚರಿಕೆ ನೀಡುತ್ತಿದ್ದಂತೆಯೇ ಸೈನ್ಯದ ಚಲನವಲನಗಳು ಚುರುಕಾಗಿವೆ:
10,000 ಸೈನಿಕರು: ಕಳೆದ ವಾರವೇ ಅಮೆರಿಕದ 10 ಸಾವಿರ ಸುಶಿಕ್ಷಿತ ಸೈನಿಕರು ಮಧ್ಯಪ್ರಾಚ್ಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಮೆರೀನ್ ಪಡೆ: ಸುಮಾರು 2,200 ಮೆರೀನ್‌ಗಳು ಮತ್ತು 3,500 ಯುದ್ಧ ಸಿಬ್ಬಂದಿ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
82ನೇ ವಾಯುಗಾಮಿ ವಿಭಾಗ: ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಅಮೆರಿಕದ ಖ್ಯಾತ ‘ಏರ್‌ಬೋರ್ನ್ ಡಿವಿಷನ್’ ಈಗ ಇರಾನ್ ಗಡಿಯತ್ತ ಧಾವಿಸುತ್ತಿದೆ
ಒಂದೆಡೆ ಅಮೆರಿಕ ಅಬ್ಬರಿಸುತ್ತಿದ್ದರೆ, ಇತ್ತ ಇರಾನ್ ಕೂಡ ಜಗ್ಗುತ್ತಿಲ್ಲ. ವಾಷಿಂಗ್ಟನ್ ಜೊತೆ ನೇರ ಮಾತುಕತೆಯನ್ನು ನಿರಾಕರಿಸಿರುವ ಟೆಹ್ರಾನ್, ಪಾಕಿಸ್ತಾನದ ಮೂಲಕ ತನ್ನ ಪ್ರತಿಕ್ರಿಯೆ ರವಾನಿಸಿದೆ. ಅತ್ತ ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕುವೈತ್‌ನ ವಿದ್ಯುತ್ ಸ್ಥಾವರ ಮತ್ತು ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ.
ಸದ್ಯಕ್ಕೆ ಗೌರವದ ಸಂಕೇತವಾಗಿ 20 ತೈಲ ಟ್ಯಾಂಕರ್‌ಗಳನ್ನು ಬಿಡಲು ಇರಾನ್ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರಾದರೂ, ಯುದ್ಧದ ಕಾರ್ಮೋಡ ಮಾತ್ರ ಸರಿದಿಲ್ಲ. ಒಂದು ವೇಳೆ ಟ್ರಂಪ್ ಹೇಳಿದಂತೆ ಇರಾನ್‌ನ ಉಪ್ಪುನೀರಿನ ನಿರೋಧಕ ಸ್ಥಾವರಗಳು ಮತ್ತು ತೈಲ ಬಾವಿಗಳು ಸ್ಫೋಟಗೊಂಡರೆ, ಅದು ಜಾಗತಿಕ ಆರ್ಥಿಕತೆಯ ಮೇಲೆ ಸುನಾಮಿಯನ್ನೇ ಎಬ್ಬಿಸಲಿದೆ.









Comments
Leave a Comment