ಅಕ್ಕನ ಮನೆಗೆಂದು ಕರೆದೊಯ್ದು ದಾರಿ ಮಧ್ಯೆಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಪತಿ; ಅನಾಥರಾದ ಕಾಲೇಜು ಮೆಟ್ಟಿಲೇರಿದ ಮಕ್ಕಳು.
ಕೋಲಾರ/ಕೆಜಿಎಫ್ : ಅವಳು ನೋಡಲು ಸುಂದರವಾಗಿದ್ದಾಳೆ ಎನ್ನುವ ಅತಿಯಾದ ಹೆಮ್ಮೆ ಇರಬೇಕಿದ್ದ ಪತಿಗೆ, ಅದೇ ಅವಳ ಸಾವಿಗೆ ಕಾರಣವಾಯಿತು. ಇಪ್ಪತ್ತು ವರ್ಷಗಳ ಕಾಲ ಜೊತೆಗಿದ್ದು, ಸಂಸಾರವೆಂಬ ಹಡಗನ್ನು ಮುನ್ನಡೆಸಿದ ಪತಿ, ಕೇವಲ ಒಂದು ಫೋನ್ ಕರೆಯ ಸಂಶಯದ ಮೇಲೆ ತನ್ನ ಪತ್ನಿಯನ್ನೇ ರಾಕ್ಷಸನಂತೆ ಕೊಚ್ಚಿ ಕೊಂದಿರುವ ಅಮಾನವೀಯ ಘಟನೆ ಕೆಜಿಎಫ್ ನಗರದ ಹೊರವಲಯದಲ್ಲಿ ನಡೆದಿದೆ.
ಘಟನೆಯ ವಿವರ:
ಆಂಧ್ರಪ್ರದೇಶದ ಕುಪ್ಪಂ ತಾಲೂಕಿನ ಪೆದ್ದೂರು ಗ್ರಾಮದ ನಿವಾಸಿ ಗೋಪಿನಾಥ್ ಎಂಬಾತನೇ ತನ್ನ ಪತ್ನಿ ಈಶ್ವರಮ್ಮ (40) ಎಂಬುವವರನ್ನು ಕೊಲೆ ಮಾಡಿದ ಆರೋಪಿ. ವೃತ್ತಿಯಲ್ಲಿ ಟೈಲರ್ ಆಗಿದ್ದ ಗೋಪಿನಾಥ್ ಮತ್ತು ಈಶ್ವರಮ್ಮ ದಂಪತಿಗೆ ಕಾಲೇಜು ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ಆದರೆ, ಗೋಪಿನಾಥ್‌ನ ಕುಡಿತದ ಚಟ ಮತ್ತು ಪತ್ನಿಯ ಶೀಲದ ಬಗ್ಗೆ ಹೊಂದಿದ್ದ ವಿಪರೀತ ಅನುಮಾನ ಇಡೀ ಸಂಸಾರವನ್ನು ಬೀದಿಗೆ ತಂದಿದೆ.
ಸಂಚು ರೂಪಿಸಿ ನಡೆದ ಹತ್ಯೆ:
ಕಳೆದ ಕೆಲವು ದಿನಗಳಿಂದ ಈಶ್ವರಮ್ಮ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿರಿಕ್ ಮಾಡುತ್ತಿದ್ದ ಗೋಪಿನಾಥ್, ಬುಧವಾರ ಸಂಜೆ 7 ಗಂಟೆಯ ವೇಳೆಗೆ ಸಂಚು ರೂಪಿಸಿದ್ದಾನೆ. "ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿಯಲ್ಲಿರುವ ಅಕ್ಕನ ಮನೆಗೆ ಹೊಲಿಗೆ ಬಟ್ಟೆ ಕೊಡಲು ಹೋಗೋಣ ಬಾ" ಎಂದು ನಂಬಿಸಿ ಪತ್ನಿಯನ್ನು ಬೈಕ್ ಮೇಲೆ ಕೂರಿಸಿಕೊಂಡಿದ್ದಾನೆ. ಬೈಕ್ ದೊಡ್ಡವಲಗಮಾದಿ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ, ಬೈಕ್ ನಿಲ್ಲಿಸಿ ಮತ್ತೆ ಗಲಾಟೆ ಆರಂಭಿಸಿದ್ದಾನೆ.
ಮಾತು ಬೆಳೆದು ಈಶ್ವರಮ್ಮ ಪತಿಯ ವರ್ತನೆಗೆ ಬೇಸತ್ತು ಬೈದಾಗ, ರೊಚ್ಚಿಗೆದ್ದ ಗೋಪಿನಾಥ್ ಬಟ್ಟೆ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಮಚ್ಚಿನಿಂದ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ. ಆರು ಬಾರಿ ಮಚ್ಚಿನಿಂದ ಕೊಚ್ಚಿದ ಪರಿಣಾಮ, ಈಶ್ವರಮ್ಮ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
"ತಾಯಿಯಿಲ್ಲದವಳು, ತಂದೆ ಜೈಲು ಪಾಲು: ಅತಂತ್ರವಾಯ್ತು ಮಕ್ಕಳ ಬದುಕು"
ಕಾಲೇಜು ಮೆಟ್ಟಿಲೇರಿ ಭವಿಷ್ಯದ ಕನಸು ಕಾಣುತ್ತಿದ್ದ ಇಬ್ಬರು ಮಕ್ಕಳ ಬದುಕು ಇಂದು ಕಗ್ಗತ್ತಲಲ್ಲಿ ಮುಳುಗಿದೆ. ಕಣ್ಣೆದುರೇ ಸುಂದರವಾಗಿದ್ದ ಸಂಸಾರವನ್ನು ಅಪ್ಪನ ಸಂಶಯದ ಬುದ್ಧಿ ಸ್ಮಶಾನವಾಗಿಸಿದ್ದು ಕಂಡು ಮಕ್ಕಳು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸರಿಗೆ ಶರಣಾದ ಆರೋಪಿ:
ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಗೋಪಿನಾಥ್, ತಡರಾತ್ರಿ ಆಂಧ್ರದ ಕುಪ್ಪಂ ತಾಲೂಕಿನ ರಾಳ್ಳಬೋದಗೂರು ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಕೂಡಲೇ ಆಂಧ್ರ ಪೊಲೀಸರು ಕೆಜಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಆರೋಪಿಯನ್ನು ಉರಿಗಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಕೆಜಿಎಫ್ ಎಸ್.ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉರಿಗಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ನಡೆಯುವ ಇಂತಹ ದುರಂತಗಳು ಸಮಾಜ ತಲೆತಗ್ಗಿಸುವಂತೆ ಮಾಡಿವೆ.









Comments
Leave a Comment