ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಲಿ ಮುಖ: ಕ್ಯಾಮೆರಾ ಆಫ್ ಮಾಡಿದರೂ ಸಿಕ್ಕಿಬಿದ್ದರು ಖಾಕಿ ಕಳ್ಳರು!
ಇಂದೋರ್: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಹಗಲು ದರೋಡೆಗೆ ಇಳಿದರೆ ಜನಸಾಮಾನ್ಯರು ಯಾರನ್ನು ನಂಬಬೇಕು? 'ಬೇಲಿಯೇ ಎದ್ದು ಹೊಲ ಮೇಯ್ದ' ಈ ಆಘಾತಕಾರಿ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ವಾರಂಟ್ ಜಾರಿ ನೆಪದಲ್ಲಿ ಉದ್ಯಮಿ ಮನೆಗೆ ನುಗ್ಗಿದ ಐವರು ಪೊಲೀಸ್ ಅಧಿಕಾರಿಗಳು ಬರೊಬ್ಬರಿ 220 ಗ್ರಾಂ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಾರೆ!
ಪೊಲೀಸ್ ಇಲಾಖೆಯ ಘನತೆಗೆ ಮಸಿ ಬಳಿದ ಈ 'ಖಾಕಿ ಕಳ್ಳರ' ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಡೀ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ.
ಘಟನೆಯ ಹಿನ್ನಲೆ: ತನಿಖೆಯಲ್ಲ, ಇದು ಸುಲಿಗೆ!
ನಿವೃತ್ತ ಎಸಿಪಿ ಒಬ್ಬರಿಗೆ ಸಂಬಂಧಿಸಿದ ಆಸ್ತಿ ವಿವಾದದ ವಾರಂಟ್ ನೀಡುವ ನೆಪದಲ್ಲಿ ಎಸ್‌ಐ ಸಂಜಯ್ ವಿಷ್ಣೋಯ್ ನೇತೃತ್ವದ ತಂಡ ಸೋಮವಾರ ಉದ್ಯಮಿ ಗೌರವ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಆದರೆ ಬಂದವರು ಅಧಿಕಾರಿಗಳಂತೆ ನಡೆದುಕೊಳ್ಳದೆ, ಪಕ್ಕಾ ವೃತ್ತಿಪರ ಕಳ್ಳರಂತೆ ವರ್ತಿಸಿದ್ದಾರೆ. ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದ ಪೊಲೀಸರು, ಸಾಕ್ಷ್ಯ ನಾಶಪಡಿಸಲು ಹೊರಗಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದರು. ಆದರೆ ಮನೆಯೊಳಗಿದ್ದ ಕ್ಯಾಮೆರಾಗಳಲ್ಲಿ ಇವರ ಕಳ್ಳಾಟ ಬಯಲಾಗಿದೆ.
ಚಿನ್ನದ ಜತೆ ಹಣಕ್ಕೂ ಕನ್ನ
ಉದ್ಯಮಿ ಗೌರವ್ ಜೈನ್ ಆರೋಪದ ಪ್ರಕಾರ, ಪೊಲೀಸರು ಕೇವಲ 220 ಗ್ರಾಂ ಚಿನ್ನ ಅಷ್ಟೇ ಅಲ್ಲದೆ, ಹಣವನ್ನೂ ಸುಲಿಗೆ ಮಾಡಿದ್ದಾರೆ.
- ಹೋಟೆಲ್ ಬಿಲ್ ಪಾವತಿಸಲು 10,000 ರೂ. ಹಣವನ್ನು ಕ್ಯೂಆರ್ ಕೋಡ್ ಮೂಲಕ ಪಡೆದಿದ್ದಾರೆ.
- ಉಳಿದ 17,000 ರೂ. ಹಣವನ್ನು ಎಸ್‌ಐ ಮಗನ ಖಾತೆಗೆ ವರ್ಗಾಯಿಸಿಕೊಳ್ಳುವ ಮೂಲಕ ತಮ್ಮ ಭ್ರಷ್ಟಾಚಾರದ ದರ್ಬಾರ್ ನಡೆಸಿದ್ದಾರೆ.
ಅತಿಥಿ ಗೃಹದಲ್ಲಿ ಹಲ್ಲೆ, ಬೆದರಿಕೆ
ದರೋಡೆ ಮಾಡಿದ್ದಲ್ಲದೆ, ಉದ್ಯಮಿಯ ಮೇಲೆ ಹಲ್ಲೆ ನಡೆಸಿ ಅವರನ್ನು ಗ್ವಾಲಿಯರ್‌ನ ಅತಿಥಿ ಗೃಹಕ್ಕೆ ಕರೆದೊಯ್ದು, ಅಲ್ಲಿ ನಿವೃತ್ತ ಎಸಿಪಿಯ ಬೆಂಬಲಿಗರಿಗೆ ಹಸ್ತಾಂತರಿಸುವ ಮೂಲಕ ಪೊಲೀಸರು 'ಕಿಡ್ನ್ಯಾಪರ್'ಗಳಂತೆ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಐವರು ಅಧಿಕಾರಿಗಳು ಅಮಾನತು
ಘಟನೆ ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ದರೋಡೆ ಆರೋಪದಡಿ ಎಸ್‌ಐ ಸಂಜಯ್ ವಿಷ್ಣೋಯ್, ರಣವೀರ್ ಕುಶ್ವಾ, ಪ್ರಣೀತ್ ಭಡೋರಿಯಾ, ದಿನೇಶ್ ಗುರ್ಜರ್ ಮತ್ತು ದೀಪೇಂದ್ರ ಮಿಶ್ರಾ ಅವರನ್ನು ಡಿಸಿಪಿ ಅಮರೇಂದ್ರ ಸಿಂಗ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂಪಾದಕೀಯ ಟಿಪ್ಪಣಿ: ಸಮವಸ್ತ್ರದ ಬಲದ ಮೇಲೆ ಜನಸಾಮಾನ್ಯರ ಆಸ್ತಿ ಲೂಟಿ ಮಾಡುವ ಇಂತಹ ಅಧಿಕಾರಿಗಳಿಗೆ ಕೇವಲ ಅಮಾನತು ಶಿಕ್ಷೆಯಲ್ಲ. ಇವರನ್ನು ಸೇವೆಯಿಂದ ವಜಾಗೊಳಿಸಿ, ಜೈಲಿಗಟ್ಟಿದಾಗ ಮಾತ್ರ ವ್ಯವಸ್ಥೆಯ ಮೇಲಿನ ನಂಬಿಕೆ ಉಳಿಯಲು ಸಾಧ್ಯ.









Comments
Leave a Comment