UPSC ಕನಸು ಕಾಣುತ್ತಿದ್ದ ಐಆರ್ಎಸ್ ಅಧಿಕಾರಿ ಮಗಳ ಬಾಳು ಮುಗಿಸಿದ ಕಾಮುಕ; ದೇಶವನ್ನೇ ಬೆಚ್ಚಿಬೀಳಿಸಿದ ಕ್ರೂರ ಕೃತ್ಯ!
ನವದೆಹಲಿ : ದೇಶದ ರಾಜಧಾನಿ ದೆಹಲಿ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಕಾಮುಕನೊಬ್ಬನ ವಿಕೃತ ಮನಸ್ಥಿತಿಗೆ ದೇಶದ ಭವಿಷ್ಯವಾಗಬೇಕಿದ್ದ ಪ್ರತಿಭಾನ್ವಿತ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಕೇವಲ 24 ಗಂಟೆಗಳ ಅಂತರದಲ್ಲಿ ಎರಡು ಅತ್ಯಾಚಾರ ಹಾಗೂ ಒಂದು ಭೀಕರ ಕೊಲೆ ಮಾಡಿದ ಈ 'ಸರಣಿ ಅಪರಾಧಿ'ಯ ಕೃತ್ಯ ಕೇಳಿದರೆ ಎದೆ ನಡುಗುತ್ತದೆ, ಕಣ್ಣೀರು ಉಕ್ಕಿ ಬರುತ್ತದೆ.
ಮನೆಯಲ್ಲೇ ನಡೆದ ಹತ್ಯಾಕಾಂಡ:
ದೆಹಲಿಯ ಕೈಲಾಶ್ ಪೂರ್ವ ಭಾಗದ ಸುಸಜ್ಜಿತ ಮನೆಯಲ್ಲಿ ಬುಧವಾರ ಮೌನ ಆವರಿಸಿತ್ತು. 22 ವರ್ಷದ ಎಂಜಿನಿಯರಿಂಗ್ ಪದವೀಧರೆ, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಆ ಯುವತಿ, ತನ್ನ ಕನಸುಗಳ ಬೆನ್ನತ್ತಿ ಓದುತ್ತಾ ಕುಳಿತಿದ್ದಳು. ಆದರೆ, ಮನೆಯಲ್ಲೇ ಕೆಲಸಕ್ಕಿದ್ದ ರಾಹುಲ್ ಎಂಬ 19 ವರ್ಷದ ನರರೂಪಿ ರಾಕ್ಷಸ ಆಕೆಯ ಪಾಲಿಗೆ ಯಮನಾಗಿ ಬಂದಿದ್ದ. ಒಂದು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಿದ್ದ ಸೇಡನ್ನು ಆಕೆಯ ಮೇಲೆ ತೀರಿಸಿಕೊಂಡಿದ್ದಾನೆ.
ಚಾರ್ಜರ್ ಕೇಬಲ್‌ನಲ್ಲಿ ಜೀವ ಹರಣ:
ತನಿಖೆಯ ಪ್ರಕಾರ, ಮೊದಲು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ, ನಂತರ ಮೊಬೈಲ್ ಚಾರ್ಜರ್ ಕೇಬಲ್ ಬಳಸಿ ಆಕೆಯ ಕತ್ತು ಹಿಸುಕಿದ್ದಾನೆ. ಕನಸುಗಳನ್ನು ಹೊತ್ತು ಕುಳಿತಿದ್ದ ಕಣ್ಣುಗಳು ಅನಾಥವಾಗಿ ಮುಚ್ಚಿಹೋದವು. ತಂದೆ ಐಆರ್ಎಸ್ ಅಧಿಕಾರಿಯಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಇತ್ತ ಮಗಳು ಕಾಮುಕನ ಕ್ರೌರ್ಯಕ್ಕೆ ಮನೆಯ ಒಳಗೇ ಹೆಣವಾಗಿ ಬಿದ್ದಿದ್ದಳು.
ರಾಜಸ್ಥಾನದಿಂದ ದೆಹಲಿಯವರೆಗೆ ವಿಕೃತಿಯ ಪಯಣ:
ಪೊಲೀಸರ ತನಿಖೆಯಲ್ಲಿ ಬಯಲಾಗಿರುವ ಸತ್ಯಗಳು ಜನಸಾಮಾನ್ಯರ ನಿದ್ದೆಗೆಡಿಸಿವೆ. ದೆಹಲಿಯಲ್ಲಿ ಈ ಕೃತ್ಯ ಎಸಗುವ ಕೇವಲ ಕೆಲವೇ ಗಂಟೆಗಳ ಮೊದಲು, ಈತ ರಾಜಸ್ಥಾನದ ಅಲ್ವಾರ್‌ನಲ್ಲಿ ತನ್ನ ಸ್ನೇಹಿತನ ಪತ್ನಿಯ ಮೇಲೆಯೇ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಅಲ್ಲಿಂದ ನೇರವಾಗಿ ದೆಹಲಿಗೆ ಬಂದು ಈ ಅಮಾಯಕ ಯುವತಿಯನ್ನು ಹತ್ಯೆ ಮಾಡಿದ್ದಾನೆ. ಈತನ ಮನಸ್ಥಿತಿ ಎಂತಹ ಭಯಾನಕ ಕ್ರಿಮಿನಲ್ ಲೋಕಕ್ಕೆ ಸೇರಿದ್ದಿರಬಹುದು ಎಂಬುದು ತನಿಖಾಧಿಕಾರಿಗಳನ್ನೇ ದಂಗಾಗಿಸಿದೆ.
ಪರಿಶೀಲನೆ ಇಲ್ಲದೆ ಕೆಲಸಕ್ಕೆ ಇಟ್ಟುಕೊಳ್ಳುವ ಮುನ್ನ ಎಚ್ಚರ!
"ಆರೋಪಿ ಒಂದೇ ದಿನ ಎರಡು ಘೋರ ಅಪರಾಧಗಳನ್ನು ಮಾಡಿದ್ದಾನೆ. ಇದು ಆತನ ವಿಕೃತ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ," ಎಂದು ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.ಮ ನೆ ಕೆಲಸಕ್ಕೆ ಬರುವವರ ಹಿನ್ನೆಲೆ ಪರಿಶೀಲನೆ ಮಾಡದೆ ಇದ್ದರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಈ ಘಟನೆ ಕಣ್ಣ ಮುಂದಿರುವ ಕರಾಳ ಸಾಕ್ಷಿ. ಸಾಲ ಮಾಡಿ ಕೆಲಸ ಕಳೆದುಕೊಂಡಿದ್ದ ಆರೋಪಿ ರಾಹುಲ್ ಈಗ ದ್ವಾರಕಾದ ಹೋಟೆಲೊಂದರಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಆದರೆ, ಆ ತಂದೆ-ತಾಯಿಗೆ ತಮ್ಮ ಮಗಳು ಮತ್ತೆ ಮರಳಿ ಬರಲಾರಳು. ಇಡೀ ದೇಶವೇ ಈ ಘಟನೆಯಿಂದ ಸ್ತಬ್ಧವಾಗಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತಿದೆ.









Comments
Leave a Comment