ಕೊನೆಯವರೆಗೂ ಉಸಿರಾಡಲು ಹೋರಾಡಿದ ಪುಟಾಣಿ ಚಿನ್ಮಯಿ
ಮೈಸೂರು:
ಕಣ್ಣು ಬಿಟ್ಟು ಜಗತ್ತನ್ನೇ ಸರಿಯಾಗಿ ನೋಡಿರದ ಆ ಕಂದಮ್ಮನಿಗೆ ಆ ಹೊಸ್ತಿಲ ಮೇಲಿನ ಆಟವೇ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವಿನ ಒಂದು ಸಣ್ಣ ತುಂಡು, ಇಂದು ಒಂದು ಸುಂದರ ಕುಟುಂಬದ ನಂದಾದೀಪವನ್ನೇ ಆರಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದ ಈ ಘಟನೆ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ನೋವಿನ ಕಥೆ ಹೀಗಿದೆ:
ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ, ಆರೂವರೆ ತಿಂಗಳ ಮುದ್ದು ಕಂದ ಚಿನ್ಮಯಿಗೌಡ. ಶನಿವಾರದ ಆ ಸಂಜೆ ಮನೆಯ ಹೊಸ್ತಿಲಲ್ಲಿ ಚಿನ್ಮಯಿ ತನ್ನ ಅಣ್ಣನ ಜೊತೆ ಮುದ್ದಾಗಿ ಆಟವಾಡುತ್ತಿದ್ದ. ಆಟದ ಗುಂಗಿನಲ್ಲಿದ್ದ ಮಗುವಿಗೆ ಹೊಸ್ತಿಲಲ್ಲಿ ಬಿದ್ದಿದ್ದ ಒಣಗಿದ ದಾಸವಾಳದ ಹೂವು ಕಂಡಿದೆ. ಕುತೂಹಲದಿಂದ ಮಗು ಅದನ್ನು ಬಾಯಿಗೆ ಹಾಕಿಕೊಂಡಿದೆ.
ಆದರೆ ವಿಧಿಯ ಆಟವೇ ಬೇರೆಯಿತ್ತು. ಅಣ್ಣ ಅದನ್ನು ಕಿತ್ತುಕೊಳ್ಳುತ್ತಾನೆಂಬ ಸಣ್ಣ ಭಯದಿಂದ ಮಗು ಅದನ್ನು ನುಂಗಲು ಪ್ರಯತ್ನಿಸಿದೆ. ಆ ಕ್ಷಣವೇ ಆ ಹೂವಿನ ತುಂಡು ಮಗುವಿನ ಗಂಟಲಲ್ಲಿ ಸಿಲುಕಿಕೊಂಡಿದೆ. ಆ ಪುಟ್ಟ ಜೀವ ಉಸಿರಾಡಲು ಒದ್ದಾಡುತ್ತಿದ್ದಾಗ, ಮನೆಯವರ ಆತಂಕ ಮುಗಿಲು ಮುಟ್ಟಿತ್ತು.
ಕೈ ಕೊಟ್ಟ ಕಾಲ, ಮೌನವಾದ ಪ್ರಾಣ:
ತಕ್ಷಣವೇ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತಂದೆ-ತಾಯಿ ಮಗುವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಸೆಯ ಕಣ್ಣುಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಧಾವಿಸಿದರು. "ನಮ್ಮ ಮಗು ಮತ್ತೆ ಕಣ್ಣು ಬಿಡುತ್ತಾನೆ, ಮತ್ತೆ ನಮ್ಮ ಜೊತೆ ಆಟವಾಡುತ್ತಾನೆ" ಎಂಬ ಭರವಸೆ ಅವರಲ್ಲಿತ್ತು. ಆದರೆ ವೈದ್ಯರ ಶತಪ್ರಯತ್ನದ ನಡುವೆಯೂ, ಚಿಕಿತ್ಸೆ ಫಲಕಾರಿಯಾಗದೆ ಚಿನ್ಮಯಿ ಇಹಲೋಕ ತ್ಯಜಿಸಿದ್ದಾನೆ.
ಕರುಳು ಹಿಂಡುವ ದೃಶ್ಯ:
ಚಿನ್ನದಂತಹ ಮಗುವನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. "ಒಂದು ಹೂವು ನಮ್ಮ ಮಗುವಿನ ಪ್ರಾಣವನ್ನೇ ತಗೆಯುತ್ತದೆ ಎಂದು ನಮಗೆ ಗೊತ್ತಿರಲಿಲ್ಲ" ಎಂದು ಪೋಷಕರು ಹಳುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಪೂಜೆಗೆ ಅರ್ಪಿಸಬೇಕಿದ್ದ ಹೂವು, ಒಂದು ಪುಟ್ಟ ಜೀವವನ್ನೇ ಬಲಿಪಡೆದ ಈ ಘಟನೆ ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆಯ ಗಂಟೆಯಾಗಿದೆ.









Comments
Leave a Comment