ಲಂಚಬಾಕ ಪಿಎಸ್‌ಐ ಭೀಮಪ್ಪ ರಬಕವಿ ಅಂಡ್ ಟೀಮ್ ಈಗ ಲೋಕಲ್ ‘ವಿಲನ್’: ಬೈಕ್ ಬಿಡಲು ಬೇಡಿಕೆಯಿಟ್ಟಿದ್ದ ಅಕ್ರಮ ಹಣದ ಆಸೆಯೇ ಮುಳುವಾಯ್ತು!
ಬಾಗಲಕೋಟೆ: ಬಡವರ ಮೇಲೆ ದಬ್ಬಾಳಿಕೆ ನಡೆಸಿ, ಅಧಿಕಾರದ ಅಮಲಿನಲ್ಲಿ ಮೆರೆಯುತ್ತಿದ್ದ ಕೆರೂರು ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ್ ಅಂತಿಮವಾಗಿ ಲೋಕಾಯುಕ್ತ ಬಲೆಗೆ ಬಿದ್ದು ಮುಖಭಂಗ ಅನುಭವಿಸಿದ್ದಾರೆ. ಇಸ್ಪೀಟ್ ಅಡ್ಡೆಯ ಆರೋಪಿಗಳನ್ನು ರಕ್ಷಿಸಲು ಮತ್ತು ಬೈಕ್ ಬಿಡುಗಡೆ ಮಾಡಲು ಭಕ್ಷೀಸು ಕೇಳಿದ ಈ 'ಖಾಕಿ ಕಿರಾತಕರ' ಅಸಲಿ ಬಣ್ಣ ಈಗ ಬಯಲಾಗಿದೆ.
ಲಂಚಬಾಕನಿಗೆ ತಕ್ಕ ಶಾಸ್ತಿ!
ಇನ್ಸ್‌ಪೆಕ್ಟರ್ ಭೀಮಪ್ಪ ತನ್ನ ವರ್ತನೆಯಿಂದ ಇಡೀ ಇಲಾಖೆಗೆ ಕಳಂಕ ತಂದಿದ್ದರು. ಸಾರ್ವಜನಿಕರ ಸೇವಕನಾಗಬೇಕಿದ್ದ ವ್ಯಕ್ತಿ, ಶೋಷಕನಂತೆ ವರ್ತಿಸುತ್ತಿದ್ದ ಎನ್ನುವುದಕ್ಕೆ ಇಂದು ನಡೆದ ದಾಳಿಯೇ ಸಾಕ್ಷಿ. 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಕೊನೆಗೆ 1.70 ಲಕ್ಷ ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಎಸ್‌ಪಿ ಮಹಾಲಿಂಗ ನಂದಗಾಂವಿ ನೇತೃತ್ವದ ತಂಡ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಇದು ಕೇವಲ ದಾಳಿಯಲ್ಲ, ಜನಸಾಮಾನ್ಯರ ಮೇಲಿನ ದೌರ್ಜನ್ಯಕ್ಕೆ ಸಿಕ್ಕ ನ್ಯಾಯ!
ರಸ್ತೆಗಿಳಿದು ಸಂಭ್ರಮಿಸಿದ ಯುವಶಕ್ತಿ
ಸಾಮಾನ್ಯವಾಗಿ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಾಗ ಜನರು ಮರುಕ ಪಡುತ್ತಾರೆ. ಆದರೆ, ಕೆರೂರು ಠಾಣೆಯ ಮುಂದೆ ಕಂಡುಬಂದ ದೃಶ್ಯವೇ ಬೇರೆ! ಯುವಕರು ಠಾಣೆಯ ಮುಂದೆಯೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದು ಈ ಪಿಎಸ್‌ಐ ಕುರಿತು ಜನರಲ್ಲಿ ಎಷ್ಟರ ಮಟ್ಟಿಗಿನ ಆಕ್ರೋಶವಿತ್ತು ಎಂಬುದನ್ನು ಸಾರಿ ಹೇಳುತ್ತಿದೆ. "ಕಷ್ಟವೆಂದು ಹೋದವರನ್ನು ಸುಲಿಗೆ ಮಾಡುತ್ತಿದ್ದ ಈ ಅಧಿಕಾರಿಗೆ ಇದು ಸರಿಯಾದ ಶಿಕ್ಷೆ" ಎಂದು ಸ್ಥಳೀಯರು ಗುಡುಗಿದ್ದಾರೆ.
ಟೀಕೆಗಳ ಸುರಿಮಳೆ: ಇನ್ನಷ್ಟು ಹಗರಣ ಬಯಲಾಗಲಿ
ಪಿಎಸ್‌ಐ ಭೀಮಪ್ಪ ಕೇವಲ ಲಂಚಕ್ಕೆ ಸೀಮಿತವಾಗಿರಲಿಲ್ಲ, ಇವರ ಆಡಳಿತ ವೈಖರಿ ಮತ್ತು ದುರ್ವರ್ತನೆ ಅಸಹ್ಯ ಹುಟ್ಟಿಸುವಂತಿತ್ತು. ಅಧಿಕಾರದ ಮದದಲ್ಲಿ ಮೆರೆದ ಈ ಭ್ರಷ್ಟ ಅಧಿಕಾರಿಯ ಇನ್ನಷ್ಟು 'ಕಪ್ಪು ಚುಕ್ಕೆ'ಗಳನ್ನು ಬಯಲಿಗೆಳೆಯಲು ಸಾರ್ವಜನಿಕರು ಸಜ್ಜಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ಜನರು, ತಮಗೆ ಎದುರಾದ ಕಿರುಕುಳದ ಸಾಕ್ಷಿಗಳನ್ನು ನೀಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ, 'ಬೇಲಿಯೇ ಎದ್ದು ಹೊಲ ಮೇಯ್ದ'ಂತಿದ್ದ ಕೆರೂರು ಪಿಎಸ್‌ಐನ ಅಧಿಕಾರಕ್ಕೆ ಲೋಕಾಯುಕ್ತ ಬಿಸಿ ಮುಟ್ಟಿಸಿದ್ದು, ಜಿಲ್ಲೆಯ ಇತರೆ ಭ್ರಷ್ಟ ಅಧಿಕಾರಿಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.









Comments
Leave a Comment